ಗಾಝಾದಲ್ಲಿ ಇಸ್ರೇಲ್ ದಾಳಿಯಿಂದ ಈವರೆಗೆ 25 ಸಾವಿರಕ್ಕೂ ಅಧಿಕ ಮಂದಿ ಸಾವು : ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿಕೆ
ಟೆಲ್ ಅವೀವ್ : ಕಳೆದ ವರ್ಷದ ಆಕ್ಟೋಬರ್ 7ರಿಂದೀಚೆಗೆ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಲ್ಲಿ 25 ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದು, ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆಯ ನೈತಿಕ ಹಾಗೂ ಕಾನೂನಾತ್ಮಕತೆಯನ್ನು ಪ್ರಶ್ನೆಗಳನ್ನು ಎತ್ತಿದ್ದಾರೆ.
ಅಮೆರಿಕದ ಸಂಸತ್ಭವನ ಕ್ಯಾಪಿಟಲ್ ಹಿಲ್ ನಲ್ಲಿ ಗುರುವಾರ ನಡೆದ ಸಶಸ್ತ್ರ ಸೇವೆಗಳ ಸದನ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಗಾಝಾದಲ್ಲಿ ಇಸ್ರೇಲ್ ನ ದಾಳಿಯಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಷ್ಟು ಮಂದಿ ಸಾವನ್ನಪ್ಪಿರಬಹುದೆಂದು ಸಂಸದ ರೊ ಖನ್ನಾ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ಇಸ್ರೇಲ್ ಗೆ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಪೂರೈಕೆ ಮಾಡುವುಉ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆಯೆಂಬ ಟರ್ಕ್ ಅವರ ಹೇಳಿಕೆಯನ್ನು ಖನ್ನಾ ಅವರು ಸಭೆಯಲ್ಲಿ ಉಲ್ಲೇಖಿಸಿದರು. ಇಸ್ರೇಲ್ ಗೆ ಅಮೆರಿಕದಿಂದ ಅತ್ಯಾಧುನಿಕ ನಿಖರ ಮಾರ್ಗದರ್ಶನದ ಯುದ್ಧ ಸಾಮಾಗ್ರಿಗಳನ್ನು ಒದಗಿಸಲು ಆಸ್ಟಿನ್ ಅವರು ಅಸಮರ್ಥರಾದರು.
ರಫಾದಲ್ಲಿ ಇಸ್ರೇಲ್ ಸೇನೆಯು ಭೂಆಕ್ರಮಣವನ್ನು ನಡೆಸಲು ಮುಂದಾದಲ್ಲಿ ಆ ದೇಶಕ್ಕೆ ಸೇನಾನೆರವನ್ನು ಹಿಂತೆಗೆದುಕೊಳ್ಳಲಾಗುತ್ತದೆಯೇ ಎಂಬುದಾಗಿಯೂ ಖನ್ನಾ ಪ್ರಶ್ನಿಸಿದರು.
ಗಾಝಾದ ದಕ್ಷಿಣದ ಗಡಿ ಭಾಗದಲ್ಲಿರುವ ನಗರವಾದ ರಫಾದಲ್ಲಿ ಆಶ್ರಯ ಪಡೆದಿರುವ 15 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಯರ ಸುರಕ್ಷತೆಯನ್ನು ಖಾತರಿಪಡಿಸಲು ವಿಶ್ವಸನೀಯವಾದ ಯೋಜನೆಯನ್ನು ರೂಪಿಸಲಾಗುವುದೆಂದು ಆಸ್ಟಿನ್ ತಿಳಿಸಿದರು.