ಗಾಝಾದಲ್ಲಿ ಇಸ್ರೇಲಿ ಪಡೆಗಳಿಂದ 7 ಸಾವಿರಕ್ಕೂ ಅಧಿಕ ಮಂದಿಯ ಹತ್ಯೆ
ಗಾಝಾ: ಗಾಝಾಪಟ್ಟಿ ಪ್ರದೇಶದಲ್ಲಿ ಇಸ್ರೇಲ್ ಕೈಗೊಂಡಿರುವ ದಾಳಿಯಿಂದ ಕನಿಷ್ಠ 7650 ಮಂದಿ ಫೆಲಸ್ತೀನಿಯನ್ನರು ಹತ್ಯೆಗೀಡಾಗಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಇಸ್ರೇಲ್ ನ ಸ್ವಯಂ ರಕ್ಷಣೆ ಹಕ್ಕನ್ನು ಬೆಂಬಲಿಸುವುದಾಗಿ ವಿದೇಶಿ ಪಡೆಗಳು ಇಸ್ರೇಲ್ ಕ್ರಮವನ್ನು ಬೆಂಬಲಿಸಿರುವ ನಡುವೆಯೇ, ಬಾಂಬ್ ದಾಳಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚುತ್ತಿದೆ. ಕದನ ವಿರಾಮ ಘೋಷಿಸುವ ಮೂಲಕ ಗಾಝಾ ನಾಗರಿಕರಿಗೆ ಮಾನವೀಯ ನೆರವು ತಲುಪಿಸಲು ಅನುವು ಮಾಡಿಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಶನಿವಾರ ಹೇಳಿಕೆಯೊಂದನ್ನು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಝಾ ವಿರುದ್ಧದ ಯುದ್ಧದಲ್ಲಿ ಇಸ್ರೇಲಿ ಪಡೆಗಳು ಎರಡನೇ ಹಂತ ತಲುಪಿವೆ ಎಂದು ಘೋಷಿಸಿದ್ದಾರೆ. ಹಮಾಸ್ ಸಂಘಟನೆಯ ಆಡಳಿತವಿರುವ ಫೆಲಸ್ತೀನ್ ಪ್ರದೇಶದಲ್ಲಿ ನೆಲಮಟ್ಟದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲಿ ಯುದ್ಧವಿಮಾನಗಳು ಬಾಂಬ್ ದಾಳಿ ನಡೆಸುತ್ತಿರುವ ನಡುವೆಯೇ ಗಾಝಾದ ನಾಗರಿಕರು ಹೊರ ಜಗತ್ತಿನ ಜತೆ ಸಂಪರ್ಕ ಕಡಿದುಕೊಂಡಿದ್ದಾರೆ. ಹಮಾಸ್ ಹೋರಾಟಗಾರರ ವಿರುದ್ಧದ ತಳಹಂತದ ಕಾರ್ಯಾಚರಣೆಗೆ ಇಸ್ರೇಲ್ ಪಡೆಗಳು ಸಜ್ಜಾಗುತ್ತಿವೆ ಎಂದು ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.