ಯುವಜನರಿಗೆ ಮಿಲಿಟರಿ ಸೇವೆ ಕಡ್ಡಾಯಗೊಳಿಸಿದ ಮ್ಯಾನ್ಮಾರ್

Update: 2024-02-11 17:08 GMT

ಸಾಂದರ್ಭಿಕ ಚಿತ್ರ (PTI)

ಯಾಂಗಾನ್ : ದೇಶದ ಹಲವು ಭಾಗಗಳಲ್ಲಿ ಹೆಚ್ಚಿನ ಸ್ವಾಯತ್ತೆಗಾಗಿ ಆಗ್ರಹಿಸಿ ಸಶಸ್ತ್ರ ಬಂಡುಗೋರ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುವಕರು ಹಾಗೂ ಯುವತಿಯರು ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದನ್ನು ಮ್ಯಾನ್ಮಾರ್ ನ ಸೇನಾಡಳಿತ ಕಡ್ಡಾಯಗೊಳಿಸಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

18ರಿಂದ 35 ವರ್ಷದವರೆಗಿನ ಎಲ್ಲಾ ಪುರುಷರು ಹಾಗೂ 18ರಿಂದ 27 ವರ್ಷದವರೆಗಿನ ಎಲ್ಲಾ ಮಹಿಳೆಯರು ಸೇನೆಯಲ್ಲಿ ಕನಿಷ್ಟ 2 ವರ್ಷ ಸೇವೆ ಸಲ್ಲಿಸಬೇಕು. 45 ವರ್ಷದವರೆಗಿನ ವೈದ್ಯರಂತಹ ತಜ್ಞ ಕ್ಷೇತ್ರದವರು ಕನಿಷ್ಟ 3 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಈಗ ದೇಶದಲ್ಲಿರುವ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಸೇವೆಗಳನ್ನು 5 ವರ್ಷಕ್ಕೆ ವಿಸ್ತರಿಸಬಹುದಾಗಿದೆ ಎಂದು ವರದಿ ಹೇಳಿದೆ.

2021ರಲ್ಲಿ ನಡೆದ ಕ್ಷಿಪ್ರದಂಗೆಯಲ್ಲಿ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿದ್ದ ಸೇನೆಯು ಆಡಳಿತವನ್ನು ಕೈವಶ ಪಡಿಸಿಕೊಂಡಿದೆ. ಆದರೆ ಕಳೆದ ವರ್ಷದ ಅಕ್ಟೋಬರ್ ನಿಂದ ಮೂರು ಜನಾಂಗೀಯ ಅಲ್ಪಸಂಖ್ಯಾತ ಬಂಡುಗೋರ ಗುಂಪುಗಳ ಒಕ್ಕೂಟದಿಂದ ಸಂಘಟಿತ ಆಕ್ರಮಣ ಎದುರಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸೇನಾಡಳಿತಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಮಧ್ಯೆ, ಸೇನೆಗೆ ಸೇರ್ಪಡೆಗೊಳ್ಳಲು ಸ್ಥಳೀಯರು ಹಿಂಜರಿಯುತ್ತಿರುವುದರಿಂದ ಸೇನಾಡಳಿತ ಸೇನಾ ಸಿಬಂದಿಗಳ ಕೊರತೆ ಎದುರಿಸುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News