ಮಾನವೀಯ ದುರಂತದ ಅಂಚಿನಲ್ಲಿ ಮ್ಯಾನ್ಮಾರ್: ವಿಶ್ವಸಂಸ್ಥೆ ಎಚ್ಚರಿಕೆ

Update: 2023-12-19 18:17 GMT

PHOTO: ANI

ವಿಶ್ವಸಂಸ್ಥೆ: ಮ್ಯಾನ್ಮಾರ್ನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಥವಾ 18 ದಶಲಕ್ಷದಷ್ಟು ಜನರು ಮಾನವೀಯ ನೆರವಿನ ಅಗತ್ಯದಲ್ಲಿದ್ದು ಆ ದೇಶದಲ್ಲಿನ ಮಾನವೀಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಮುಂದಿನ ವರ್ಷ ಮ್ಯಾನ್ಮಾರ್ನಲ್ಲಿ ತುರ್ತು ನೆರವಿನ ಅಗತ್ಯವಿರುವ ಜನರಿಗೆ ನೆರವು ಒದಗಿಸಲು ಶತಕೋಟಿ ಡಾಲರ್ನ ಅಗತ್ಯವಿದೆ. ಈಗ ಮ್ಯಾನ್ಮಾರ್ ಮಾನವೀಯ ದುರಂತದ ಅಂಚಿನಲ್ಲಿದೆ. 2021ರಲ್ಲಿ ಸೇನೆ ಅಧಿಕಾರ ಕೈವಶ ಮಾಡಿಕೊಂಡಂದಿನಿಂದ ಆ ದೇಶದ ಜನತೆ ಭಯದಲ್ಲಿ ಬದುಕುವಂತಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರ ಏಜೆನ್ಸಿ(ಒಸಿಎಚ್ಎ) ವರದಿ ಮಾಡಿದೆ.

ಪ್ರಸ್ತುತ ಮ್ಯಾನ್ಮಾರ್ನಲ್ಲಿ 18.6 ದಶಲಕ್ಷ ಜನತೆ ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ. ಮಕ್ಕಳ ಮೇಲೆ ಬಿಕ್ಕಟ್ಟಿನ ಪರಿಣಾಮ ತೀವ್ರವಾಗಿದ್ದು ಸ್ಥಳಾಂತರದ ಸಮಸ್ಯೆಯಿಂದಾಗಿ ಸುಮಾರು 6 ದಶಲಕ್ಷ ಮಕ್ಕಳು ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆ, ಬಲವಂತದ ದುಡಿಮೆ, ಮಾನಸಿಕ ಒತ್ತಡ ಮತ್ತು ಆಹಾರ ಭದ್ರತೆಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಮ್ಯಾನ್ಮಾರ್ಗೆ ವಿಶ್ವಸಂಸ್ಥೆಯ ಹಂಗಾಮಿ ಮಾನವೀಯ ಸಂಯೋಜಕ ಮಾರ್ಕೋಲಿಗಿ ಕೋರ್ಸಿ ಹೇಳಿದ್ದಾರೆ.

ಡಿಸೆಂಬರ್ 11ರವರೆಗಿನ ಮಾಹಿತಿಯಂತೆ ಮ್ಯಾನ್ಮಾರ್ನಲ್ಲಿ ಸುಮಾರು 2.6 ದಶಲಕ್ಷ ಜನತೆ ತಮ್ಮ ಮನೆಯಿಂದ ಸ್ಥಳಾಂತರಗೊಂಡಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 1.1 ದಶಲಕ್ಷದಷ್ಟು ಅಧಿಕವಾಗಿದೆ. 2024ರಲ್ಲಿ ಸಂಘರ್ಷ ಮತ್ತು ಹಿಂಸಾಚಾರ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದ್ದು ನಾಗರಿಕರ ವಿರುದ್ಧದ ವ್ಯವಸ್ಥಿತ ಮಿಲಿಟರಿ ಹಿಂಸಾಚಾರವನ್ನು ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News