ತಾಂತ್ರಿಕ ಅಡಚಣೆಯಿಂದ ಸಂಪರ್ಕ ಕಳೆದುಕೊಂಡಿದ್ದ ಮಂಗಳ ಗ್ರಹದ ಮೇಲಿನ ಇನ್ ಜೆನ್ಯುಟಿ ಹೆಲಿಕಾಪ್ಟರ್; ಮರು ಸಂಪರ್ಕ ಸಾಧಿಸಿದ ನಾಸಾ
ವಾಷಿಂಗ್ಟನ್: ಅನಿರೀಕ್ಷಿತ ತಾಂತ್ರಿಕ ಅಡಚಣೆಯಿಂದಾಗಿ ಸಂಪರ್ಕ ಕಳೆದುಕೊಂಡು, ಅಂತ್ಯಗೊಂಡಿತು ಎಂಬ ಭೀತಿ ಸೃಷ್ಟಿಸಿದ್ದ ಭಾರಿ ಕ್ಷಮತೆಯ ಮಂಗಳ ಗ್ರಹದ ಮೇಲಿನ ಹೆಲಿಕಾಪ್ಟರ್ ನೊಂದಿಗೆ ಮರು ಸಂಪರ್ಕ ಸಾಧಿಸಲಾಗಿದೆ ಎಂದು ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಶನಿವಾರ ಹೇಳಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
1.6 ಅಡಿ ಉದ್ದದ (0.5 ಮೀಟರ್) ಡ್ರೋನ್ ಆದ ಇನ್ ಜೆನ್ಯುಟಿ ಹೆಲಿಕಾಪ್ಟರ್ 2021ರಲ್ಲಿ ಮಂಗಳನ ಅಂಗಳಕ್ಕೆ ಪರ್ಸರ್ವೆನ್ಸ್ ರೋವರ್ ನೊಂದಿಗೆ ಕಾಲಿಟ್ಟಿತ್ತು. ಇದರೊಂದಿಗೆ ಅನ್ಯ ಗ್ರಹದಲ್ಲಿ ಸ್ವಯಂಚಾಲಿತವಾಗಿ ಹಾರಾಡಬಲ್ಲ ಪ್ರಪ್ರಥಮ ಹೆಲಿಕಾಪ್ಟರ್ ಎಂಬ ಹಿರಿಮೆಗೆ ಪಾತ್ರವಾಗಿತ್ತು.
ಪೆರ್ಸರ್ವೆನ್ಸ್ ರೋವರ್ ಮೂಲಕ ದತ್ತಾಂಶವನ್ನು ಭೂಮಿಗೆ ಹೆಲಿಕಾಪ್ಟರ್ ರವಾನಿಸುತ್ತಿತ್ತು. ಆದರೆ, ಗುರುವಾರ ಮಂಗಳ ಗ್ರಹದ ಮೇಲಿನ ತನ್ನ 72ನೇ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ದಿಢೀರನೆ ತನ್ನ ಸಂಪರ್ಕ ಕಳೆದುಕೊಂಡಿತ್ತು.
“ಪರ್ಸರ್ವೆನ್ಸ್ ರೋವರ್ ಅನ್ನು ನಿಯಂತ್ರಿಸುವ ಮೂಲಕ ಇನ್ ಜೆನ್ಯುಟಿ ಸಿಗ್ನಲ್ ನೊಂದಿಗೆ ದೀರ್ಘಕಾಲದ ಆಲಿಸುವಿಕೆ ಅವಧಿಯನ್ನು ಏರ್ಪಡಿಸಿ, ಹೆಲಿಕಾಪ್ಟರ್ ನೊಂದಿಗೆ ಕೊನೆಗೂ ಮರು ಸಂಪರ್ಕ ಸಾಧಿಸಲಾಯಿತು” ಎಂದು ಶನಿವಾರ ನಾಸಾ ಸಂಸ್ಥೆಯ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಪರ್ಸರ್ವೆನ್ಸ್ ರೋವರ್ ನೊಂದಿಗೆ ಕೆಲಸ ನಿರ್ವಹಿಸುತ್ತಿರುವ ಇನ್ ಜೆನ್ಯುಟಿ ಹೆಲಿಕಾಪ್ಟರ್, ಗಾಳಿಯಲ್ಲಿ ಹಾರಾಡುವ ಮೂಲಕ ಚಕ್ರಸಹಿತ ಸಂಗಾತಿಯಾದ ರೋವರ್ ಗೆ ಪುರಾತನ ಸೂಕ್ಷ್ಮಜೀವಿಗಳನ್ನು ಪತ್ತೆ ಹಚ್ಚಲು ನೆರವು ಒದಗಿಸುತ್ತಿದೆ.