ಚುನಾವಣೆಯ ಬಳಿಕ ಭಾರತದ ಜತೆಗಿನ ಸಂಬಂಧ ಸುಧಾರಿಸಬಹುದು : ಪಾಕ್ ರಕ್ಷಣಾ ಸಚಿವ
ಇಸ್ಲಾಮಾಬಾದ್: ಭಾರತದಲ್ಲಿ ಲೋಕಸಭೆ ಚುನಾವಣೆಯ ಮುಗಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಭರವಸೆ ವ್ಯಕ್ತಪಡಿಸಿರುವುದಾಗಿ ಜಿಯೊ ಟಿವಿ ವರದಿ ಮಾಡಿದೆ.
ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಅದರದ್ದೇ ಆದ ಹಿನ್ನೆಲೆಯಿದೆ. ಅಲ್ಲಿ(ಭಾರತದಲ್ಲಿ) ಚುನಾವಣೆ ಮುಗಿದ ನಂತರ ದ್ವಿಪಕ್ಷೀಯ ಸಂಬಂಧ ಸುಧಾರಿಸಬಹುದು ಎಂದು ಆಸಿಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ತನ್ನ ನೆರೆಯ ರಾಷ್ಟ್ರಗಳಾದ ಇರಾನ್, ಅಫ್ಘಾನಿಸ್ತಾನ ಮತ್ತು ಚೀನಾದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಸಮಯದಲ್ಲಿ ಆಸಿಫ್ ಅವರ ಹೇಳಿಕೆ ಬಂದಿದೆ. ಅಫ್ಘಾನಿಸ್ತಾನದ ಬಗ್ಗೆ ಉಲ್ಲೇಖಿಸಿದ ಆಸಿಫ್ ` ಇತ್ತೀಚೆಗೆ ತನ್ನ ನೇತೃತ್ವದಲ್ಲಿ ಉನ್ನತ ನಿಯೋಗವೊಂದು ಅಫ್ಘಾನ್‍ಗೆ ಭೇ ಟಿನೀಡಿ ಭಯೋತ್ಪಾದನೆ ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರವನ್ನು ಕೋರಿತ್ತು. ಆದರೆ ಅವರು ಪ್ರಾಯೋಗಿಕವಾಗಿ ಸಾಧ್ಯವಾಗದ ಪರಿಹಾರ ಸೂತ್ರವನ್ನು ಮುಂದಿರಿಸಿದ್ದಾರೆ. ಪಾಕಿಸ್ತಾನ ಯಾವತ್ತೂ ಅಫ್ಘಾನಿಸ್ತಾನದ ಪರ ನಿಂತಿದೆ, ಅವರಿಗಾಗಿ ಸಾಕಷ್ಟು ತ್ಯಾಗ ಮಾಡಿದೆ ಮತ್ತು ಅವರ ಪರವಾಗಿ ಯುದ್ಧವನ್ನೂ ಮಾಡಿದೆ. ಆದರೆ ಪಾಕಿಸ್ತಾನದ ಬಗ್ಗೆ ಅಫ್ಘಾನ್‍ನ ಮಧ್ಯಂತರ ಸರಕಾರದ ಧೋರಣೆಯಲ್ಲಿ ಏರಿಳಿತದಿಂದಾಗಿ ನಮ್ಮ ಆಯ್ಕೆ ಈಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ' ಎಂದು ಹೇಳಿದರು.