ರಕ್ಷಣೆ ಕೋರಿದ್ದ ಯುವತಿಯನ್ನೇ ಗುಂಡಿಕ್ಕಿ ಹತ್ಯೆಗೈದ ಪೊಲೀಸರು

Update: 2024-04-03 15:04 GMT

ಲಾಸ್‍ಏಂಜಲೀಸ್: ಅಪಹರಣಕ್ಕೆ ಒಳಗಾಗಿದ್ದ ಯುವತಿಯನ್ನು ರಕ್ಷಿಸುವ ಕಾರ್ಯಾಚರಣೆ ಸಂದರ್ಭ ನಡೆದ ಎಡವಟ್ಟಿನಿಂದ ಪೊಲೀಸರು ಯುವತಿಯನ್ನೇ ಗುಂಡಿಕ್ಕಿ ಹತ್ಯೆಗೈದ ಘಟನೆ ಕ್ಯಾಲಿಫೋರ್ನಿಯಾ ಹೆದ್ದಾರಿಯಲ್ಲಿ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

2022ರ ಸೆಪ್ಟಂಬರ್ ನಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆದಿದ್ದು ಯುವತಿ ಪೊಲೀಸರು ಹಾರಿಸಿದ ಗುಂಡಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಲಾಸ್ ಏಂಜಲೀಸ್‍ನ ಸ್ಯಾನ್ ಬೆರ್ನಾಡಿನೊ ನಗರದ ನಿವಾಸಿ ಆಂಟನಿ ಗ್ರಾಝಿಯನೊ ಎಂಬಾತ ತನ್ನ ಪತ್ನಿಯನ್ನು ಹತ್ಯೆಗೈದು 15 ವಯಸ್ಸಿನ ಮಗಳು ಸವಾನ್ನ ಗ್ರಾಝಿಯಾನೊಳನ್ನು ಕಾರಿನಲ್ಲಿ ಅಪಹರಿಸಿದ್ದಾನೆ ಎಂಬ ಮಾಹಿತಿಯಂತೆ ಪೊಲೀಸರು ಕ್ಯಾಲಿಫೋರ್ನಿಯಾ ಹೆದ್ದಾರಿಯಲ್ಲಿ ಆಂಟನಿಯ ಕಾರನ್ನು ಬೆನ್ನಟ್ಟಿದ್ದಾರೆ.

ಕೆಲ ದೂರ ಸಾಗಿದ ಬಳಿಕ ಅಂಟೋನಿಯೊ ಚಲಾಯಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಹೆಲಿಕಾಪ್ಟರ್‌ ನಲ್ಲಿಯೂ ಪೊಲೀಸರ ತಂಡವೊಂದು ಕಾರಿನ ಮೇಲೆ ನಿಗಾ ಇರಿಸಿದೆ. ಕಾರು ನಿಂತ ಬಳಿಕ ಯುವತಿ ಕಾರಿನಿಂದ ಕೆಳಗಿಳಿದು ಪೊಲೀಸರತ್ತ ಓಡಿಬರುತ್ತಿರುವುದು ಹೆಲಿಕಾಪ್ಟರ್‌ ನಲ್ಲಿದ್ದ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ ಸ್ವಲ್ಪ ದೂರದಲ್ಲಿದ್ದ ಪೊಲೀಸರು ತಪ್ಪು ತಿಳುವಳಿಕೆಯಿಂದ ಯುವತಿಯ ಮೇಲೆಯೇ ಗುಂಡು ಹಾರಿಸಿದ್ದರಿಂದ ಆಕೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಬಳಿಕ ಕಾರಿನಲ್ಲಿದ್ದ ಆಂಟೊನಿಯೊನನ್ನೂ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಯುವತಿ ಸವಾನ್ನ ಗ್ರಾಝಿಯಾನೊಳನ್ನು ಆಕೆಯ ತಂದೆಯೇ ಗುಂಡಿಕ್ಕಿ ಸಾಯಿಸಿರುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಪ್ರಕರಣದ ತನಿಖೆ ನಡೆಸಿದ ಕ್ಯಾಲಿಫೋರ್ನಿಯಾ ನ್ಯಾಯಾಂಗ ಇಲಾಖೆ, ಪೊಲೀಸರ ಗುಂಡೇಟಿನಿಂದಲೇ ಯುವತಿ ಸಾವನ್ನಪ್ಪಿರುವುದನ್ನು ದೃಢಪಡಿಸಿದೆ. ಆದರೆ ಆರೋಪಿ ಪೊಲೀಸರ ಹೆಸರನ್ನು ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News