ವಿಶ್ವಸಂಸ್ಥೆ ರಾಜಕೀಯ ನಿಯೋಗ ವಾಪಸಾತಿಗೆ ಸೊಮಾಲಿಯಾ ಆಗ್ರಹ
ಮೊಗದಿಶು: ಸೊಮಾಲಿಯಾ ಸರಕಾರಕ್ಕೆ ಶಾಂತಿ ಸ್ಥಾಪನೆ, ಭದ್ರತಾ ಸುಧಾರಣೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬಗ್ಗೆ ಕಳೆದ ಒಂದು ದಶಕದಿಂದ ಸಲಹೆ ನೀಡಲು ನಿಯೋಜಿಸಲಾಗಿದ್ದ ವಿಶ್ವಸಂಸ್ಥೆ ರಾಜಕೀಯ ನಿಯೋಗವನ್ನು ವಾಪಾಸು ಕರೆಸಿಕೊಳ್ಳುವಂತೆ ಸೊಮಾಲಿಯಾದ ವಿದೇಶಾಂಗ ಇಲಾಖೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದು ಆಗ್ರಹಿಸಿದೆ.
360 ಸದಸ್ಯರ `ಯುನೈಟೆಡ್ ನೇಷನ್ಸ್ ಅಸಿಸ್ಟೆನ್ಸ್ ಮಿಷನ್ ಇನ್ ಸೊಮಾಲಿಯಾ(ಯುಎನ್‍ಎಸ್‍ಒಎಂ)' ನಿಯೋಗವನ್ನು ತಕ್ಷಣ ವಾಪಾಸು ಕರೆಸಿಕೊಳ್ಳುವಂತೆ ಸೊಮಾಲಿಯಾ ಆಗ್ರಹಿಸಿದೆ. ನಮ್ಮ ಪಾಲುದಾರಿಕೆಯ ಮುಂದಿನ ಹಂತಕ್ಕೆ ಪರಿವರ್ತನೆಗೊಳ್ಳಲು ಇದು ಸಕಾಲ ಎಂಬ ವಿಶ್ವಾಸ ಸರಕಾರಕ್ಕಿದೆ ಎಂದು ಪತ್ರದಲ್ಲಿ ಸೊಮಾಲಿಯಾದ ವಿದೇಶಾಂಗ ಸಚಿವರು ಉಲ್ಲೇಖಿಸಿದ್ದಾರೆ. ಸೊಮಾಲಿಯಾ ಅಧ್ಯಕ್ಷರ ಸಲಹೆಗಾರರು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿರುವುದನ್ನು ದೃಢಪಡಿಸಿದ್ದು, ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸಮನ್ವಯ ಸಾಧಿಸಲು ಸೊಮಾಲಿಯಾಗೆ ವಿಶ್ವಸಂಸ್ಥೆಯ ನೆರವಿನ ಅಗತ್ಯವಿಲ್ಲ ಎಂದಿದ್ದಾರೆ. ಯುಎನ್‍ಎಸ್‍ಒಎಂ ನಿರ್ಣಾಯಕ ಪಾತ್ರ ವಹಿಸಿದೆ, ಆದರೆ ಈಗ ಅದು ಉಪಯುಕ್ತತೆಯನ್ನು ಮೀರಿದೆ. ಅಲ್ಲದೆ ಇದು ನಮ್ಮ ಬಜೆಟ್‍ನ ಮೇಲೆ ವಾರ್ಷಿಕ 100 ದಶಲಕ್ಷ ಡಾಲರ್ ವೆಚ್ಚದ ಹೊರೆಯಾಗಿದೆ ಎಂದವರು ಹೇಳಿದ್ದಾರೆ. ವಿಶ್ವಸಂಸ್ಥೆ ನಿಯೋಗ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಈ ಹಿಂದೆ ಸರಕಾರ ಆರೋಪಿಸಿತ್ತು. ಸಂವಿಧಾನಕ್ಕೆ ಬದಲಾವಣೆ ತಂದು ಅಧಿಕಾರ ಕೇಂದ್ರೀಕರಣಕ್ಕೆ ಅಧ್ಯಕ್ಷ ಹಸನ್ ಶೇಖ್ ಮಹ್ಮೂದ್ ಯೋಜಿಸಿದ್ದಾರೆ. ಆದರೆ ಫೆಡರಲ್ ಸರಕಾರದ ಅಜೆಂಡಾ ಮತ್ತು ಹೆಚ್ಚಿನ ಸ್ಯಾಯತ್ತೆಗಾಗಿ ರಾಜ್ಯಗಳ ಬಯಕೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ವಿಶ್ವಸಂಸ್ಥೆ ನಿಯೋಗ ಪ್ರಯತ್ನಿಸುತ್ತಿತ್ತು. ಇದೀಗ ಸಾಂವಿಧಾನಿಕ ಪರಿಷ್ಕರಣೆಗಳು, ಫೆಡರಲಿಸಂ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಸೊಮಾಲಿಯಾದ ಫೆಡರಲ್ ಸರಕಾರದಿಂದ ದೃಢ ಮತ್ತು ಏಕಪಕ್ಷೀಯ ಕ್ರಮಗಳನ್ನು ನಿರೀಕ್ಷಿಸಬಹುದು' ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. `ಸೊಮಾಲಿಯಾದ ಕೋರಿಕೆಯು ಒಂದು ದಶಕಕ್ಕೂ ಅಧಿಕ ಸಮಯದಿಂದ ಸೊಮಾಲಿ ಅಧಿಕಾರಿಗಳನ್ನು ಬೆಂಬಲಿಸಿದ ವಿಶ್ವಸಂಸ್ಥೆ ನಿಯೋಗದ ಕೆಲಸಕ್ಕೆ ಮರಣ ಶಾಸನವಾಗಿದೆ' ಎಂದು ಯುಎನ್‍ಎಸ್‍ಒಎಂ ಪ್ರತಿಕ್ರಿಯಿಸಿದೆ.
ಆದರೆ ಮಾನವೀಯ ನೆರವಿನ ಏಜೆನ್ಸಿಗಳ ಸಹಿತ ವಿಶ್ವಸಂಸ್ಥೆಯ ಇತರ ಏಜೆನ್ಸಿಗಳು ಸೊಮಾಲಿಯಾದಲ್ಲಿ ಉಳಿಯಲಿದೆ. ವಿಶ್ವಸಂಸ್ಥೆ ನೇಮಿಸಿದ ಆಫ್ರಿಕನ್ ಯೂನಿಯನ್ ಶಾಂತಿಪಾಲನಾ ಪಡೆಯ 10,000 ಯೋಧರು ಸೊಮಾಲಿಯಾದಲ್ಲಿ ಕರ್ತವ್ಯ ಮುಂದುವರಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.