ಪಕ್ಷಪಾತ ತ್ಯಜಿಸಿ, ಇಸ್ರೇಲ್ ಮೇಲೆ ಒತ್ತಡ ಹೆಚ್ಚಿಸಿ : ಅಮೆರಿಕಕ್ಕೆ ಹಮಾಸ್ ಆಗ್ರಹ

Update: 2024-09-06 17:06 GMT

PC : PTI

ಗಾಝಾ : ಗಾಝಾ ಯುದ್ಧವಿರಾಮಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದದ ಮಾತುಕತೆ ಪ್ರಗತಿಯಲ್ಲಿಲ್ಲ ಎಂಬ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯನ್ನು ಖಂಡಿಸಿರುವ ಫೆಲಸ್ತೀನ್ ಸಶಸ್ತ್ರ ಹೋರಾಟಗಾರರ ಗುಂಪು ಹಮಾಸ್, ಅಮೆರಿಕವು ಪಕ್ಷಪಾತದ ಧೋರಣೆಯನ್ನು ತ್ಯಜಿಸಿ ಇಸ್ರೇಲ್ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದೆ.

ಅಮೆರಿಕದ ಆಡಳಿತ ಮತ್ತು ಅದರ ಅಧ್ಯಕ್ಷ ಬೈಡನ್‌ ಗೆ ಕದನ ವಿರಾಮ ಒಪ್ಪಂದ ಅಂತಿಮಗೊಳ್ಳಲು ಮತ್ತು ಕೈದಿಗಳ ವಿನಿಮಯ ಪ್ರಕ್ರಿಯೆ ಪೂರ್ಣಗೊಳ್ಳಲು ನಿಜವಾಗಿಯೂ ಮನಸಿದ್ದರೆ, ಅವರು ಇಸ್ರೇಲ್ ಪರವಾದ ತಮ್ಮ ಅಂಧ ಪಕ್ಷಪಾತ ಧೋರಣೆಯನ್ನು ತ್ಯಜಿಸಬೇಕು ಮತ್ತು ನೆತನ್ಯಾಹು ಮತ್ತವರ ಸರಕಾರದ ಮೇಲೆ ನಿಜವಾದ ಒತ್ತಡ ಹೇರಬೇಕು' ಎಂದು ಹಮಾಸ್ ನ ಮುಖ್ಯ ಮಧ್ಯಸ್ಥಿಕೆದಾರ ಖಲೀಲ್ ಅಲ್-ಹಯಾ ಹೇಳಿದ್ದಾರೆ.

ಈ ಮಧ್ಯೆ, ಅಮೆರಿಕದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು `ಕದನ ವಿರಾಮಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದ ಪ್ರಗತಿಯಲ್ಲಿಲ್ಲ ಎಂದಿದ್ದಾರೆ. `ದುರದೃಷ್ಟವಶಾತ್ ಅದು ಸಮೀಪದಲ್ಲಿಲ್ಲ, ಆದರೆ ಕದನ ವಿರಾಮ ಒಪ್ಪಂದಕ್ಕೆ ಪೂರಕವಾದ ಮಾತುಕತೆ ನಡೆಯುವಂತೆ ನಾವು ಪ್ರಯತ್ನ ಮುಂದುವರಿಸುತ್ತೇವೆ. ಮತ್ತು ಇದೇ ವೇಳೆ, ಗಾಝಾಕ್ಕೆ ಶಸ್ತ್ರಾಸ್ತ್ರ ಮರುಪೂರೈಸುವ ಇರಾನ್ ಪ್ರಯತ್ನಗಳನ್ನೂ ತಡೆಯುತ್ತೇವೆ' ಎಂದಿದ್ದಾರೆ. ಹಮಾಸ್ ಗೆ ಶಸ್ತ್ರಾಸ್ತ್ರ ಕಳ್ಳಸಾಗಣೆಯ ಪ್ರಮುಖ ಮಾರ್ಗವಾಗಿರುವ ಈಜಿಪ್ಟ್-ಗಾಝಾ ಗಡಿಭಾಗದಲ್ಲಿರುವ ಫಿಲಾಡೆಲ್ಫಿ ಕಾರಿಡಾರ್ ನ ನಿಯಂತ್ರಣವನ್ನು ಇಸ್ರೇಲ್ ಹೊಂದಿರುವುದು ಅತ್ಯಗತ್ಯವಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.

ಗಾಝಾದಿಂದ ಇಸ್ರೇಲ್ ಪಡೆ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಹಮಾಸ್ ಆಗ್ರಹಿಸುತ್ತಿದ್ದು ನೆತನ್ಯಾಹು ಅವರ ನಿಲುವು ಕದನ ವಿರಾಮ ಒಪ್ಪಂದವನ್ನು ತಲುಪಲು ಅಡ್ಡಿಯಾಗುತ್ತಿದೆ ಎಂದಿದೆ. ಬೈಡನ್ ರೂಪಿಸಿದ ಒಪ್ಪಂದಕ್ಕೆ ನಮ್ಮ ಸಮ್ಮತಿಯಿದೆ. ಆದರೆ ಅದಕ್ಕೆ ಇಸ್ರೇಲ್ ಹೊಸದಾಗಿ ಪ್ರಸ್ತಾವಿಸಿರುವ ಷರತ್ತುಗಳಿಗೆ ನಮ್ಮ ಒಪ್ಪಿಗೆಯಿಲ್ಲ. ಮಾತುಕತೆಯನ್ನು ದೀರ್ಘಾವಧಿಗೆ ವಿಸ್ತರಿಸಿ ನಮ್ಮ ಜನರ ಮೇಲೆ ಆಕ್ರಮಣ ಮುಂದುವರಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ' ಎಂದು ಹಮಾಸ್ ಹೇಳಿದೆ.

ಕದನ ವಿರಾಮ ಒಪ್ಪಂದ 90%ರಷ್ಟು ಅಂತಿಮಗೊಂಡಿದೆ. ಆದರೆ ಎಲ್ಲಾ ವಿಷಯಗಳ ಬಗ್ಗೆಯೂ ಒಮ್ಮತ ಮೂಡಿದರೆ ಮಾತ್ರ ಮಾತುಕತೆ ಪೂರ್ಣಗೊಳ್ಳುತ್ತದೆ. ಕೆಲವು ವಿಷಯಗಳು ಜಟಿಲವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಇಸ್ರೇಲ್ ನ ವಿಧಾನವು ಸತ್ಯಗಳನ್ನು ಸುಳ್ಳು ಮಾಡುವ ವಿಧಾನಗಳನ್ನು ಆಧರಿಸಿದೆ ಮತ್ತು ಸುಳ್ಳನ್ನು ಪುನರಾವರ್ತಿಸುವ ಮೂಲಕ ಪ್ರಪಂಚದ ಸಾರ್ವಜನಿಕ ಅಭಿಪ್ರಾಯವನ್ನು ಹಾದಿ ತಪ್ಪಿಸುತ್ತಿದೆ. ಇಂತಹ ನಡೆಗಳು ಅಂತಿಮವಾಗಿ ಶಾಂತಿ ಪ್ರಯತ್ನಗಳ ಅವನತಿಗೆ ಕಾರಣವಾಗುತ್ತದೆ ಎಂದು ಕದನ ವಿರಾಮ ಒಪ್ಪಂದ ಮಾತುಕತೆಯ ಪ್ರಮುಖ ಮಧ್ಯಸ್ಥಿಕೆದಾರ ಖತರ್ ಹೇಳಿದೆ. ಈ ಮಧ್ಯೆ ` ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಮಿಲಿಟರಿ ಹಮಾಸ್ ವಿರುದ್ಧ ಪೂರ್ಣ ಬಲ ಬಳಸಿ ಆಕ್ರಮಣ ತೀವ್ರಗೊಳಿಸಬೇಕು. ಪಶ್ಚಿಮದಂಡೆಯ ವಿವಿಧೆಡೆ ವಿವಿಧ ಹೆಸರನ್ನು ಹೊಂದಿರುವ ಈ ಭಯೋತ್ಪಾದಕ ಸಂಘಟನೆಯನ್ನು ಅಳಿಸಿ ಹಾಕಬೇಕು' ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ. ಆಕ್ರಮಿತ ಪಶ್ಚಿಮದಂಡೆಯ ಫರಾ ನಿರಾಶ್ರಿತರ ಶಿಬಿರ, ಟ್ಯುಬಾಸ್ ಪ್ರದೇಶದಲ್ಲಿ ಗುರುವಾರ ಉದ್ದೇಶಿತ ಗುರಿಯ ಮೇಲೆ ನಡೆಸಿದ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News