ಇಸ್ರೇಲ್ ಪ್ರಧಾನಿ ನೆತನ್ಯಾಹು ನಿವಾಸದ ಮೇಲೆ ಬಾಂಬ್ ದಾಳಿ

Update: 2024-11-17 06:06 GMT

Screengrab:X/@sentdefender

ಜೆರುಸಲೇಮ್: ಉತ್ತರ ಇಸ್ರೇಲ್‌ ನ ಸಿಸೇರಿಯಾ ಪಟ್ಟಣದಲ್ಲಿ ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

ನೆತನ್ಯಾಹು ಅವರ ನಿವಾಸದ ಮೇಲೆ ಎಸೆಯಲಾದ ಎರಡು ಬಾಂಬ್ ಗಳು ಉದ್ಯಾನ ಪ್ರದೇಶಕ್ಕೆ ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಘಟನೆ ನಡೆದಾಗ ನೆತನ್ಯಾಹು ಅಥವಾ ಅವರ ಕುಟುಂಬದವರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್‌ ನ ನೂತನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಘಟನೆಯು ಎಲ್ಲಾ ಕೆಂಪು ಗೆರೆಗಳನ್ನು ಮೀರಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಇಸ್ರೇಲ್ ಪೊಲೀಸರಿಗೆ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಕೂಡ ಈ ದಾಳಿಯನ್ನು ಖಂಡಿಸಿದ್ದು, ಇದು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಘಟನೆಯಾಗಿದೆ. ಈ ಕುರಿತು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ ನಲ್ಲಿ ಸಿಸೇರಿಯಾದಲ್ಲಿರುವ ನೆತನ್ಯಾಹು ಅವರ ಮನೆಯ ಬಳಿ ಡ್ರೋನ್ ದಾಳಿ ನಡೆದಿತ್ತು, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಇದೀಗ ಮತ್ತೆ ನೆತನ್ಯಾಹು ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News