ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ವೀಸಾ ಕೊಡುವುದಿಲ್ಲ : ಇಸ್ರೇಲ್ ರಾಯಭಾರಿ ಘೋಷಣೆ
ಹೊಸದಿಲ್ಲಿ: ಇಸ್ರೇಲ್ನಲ್ಲಿ ಹಮಾಸ್ ನಡೆಸಿರುವ ಆಕ್ರಮಣವನ್ನು ‘‘ಸಮರ್ಥಿಸುವ ರೀತಿಯಲ್ಲಿ’’ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿಕೆ ನೀಡಿರುವುದಕ್ಕೆ ಪ್ರತಿಯಾಗಿ, ತನ್ನ ದೇಶವು ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ವೀಸಾಗಳನ್ನು ನಿರಾಕರಿಸಲಿದೆ ಎಂದು ವಿಶ್ವಸಂಸ್ಥೆಗೆ ಇಸ್ರೇಲ್ನ ರಾಯಭಾರಿ ಗಿಲಾಡ್ ಎರ್ಡನ್ ಬುಧವಾರ ಹೇಳಿದ್ದಾರೆ.
‘‘ಅವರು ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ನಾವು ವೀಸಾಗಳನ್ನು ನಿರಾಕರಿಸುತ್ತೇವೆ’’ ಎಂದು ಆರ್ಮಿ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಎರ್ಡನ್ ಹೇಳಿದ್ದಾರೆ.
‘‘ನಾವು ಈಗಾಗಲೇ ಮಾನವೀಯ ವ್ಯವಹಾರಗಳ ಅಧೀನ ಮಹಾಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್ಗೆ ವೀಸಾ ನಿರಾಕರಿಸಿದ್ದೇವೆ. ಅವರಿಗೆ ಪಾಠ ಕಲಿಸುವ ಸಮಯ ಈಗ ಬಂದಿದೆ’’ ಎಂದು ಅವರು ನುಡಿದರು.
ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಗುಟೆರಸ್ ಆಡಿರುವ ಮಾತುಗಳು ಇಸ್ರೇಲಿಯರನ್ನು ಕೆರಳಿಸಿವೆ. ‘‘ಹಮಾಸ್ ನಡೆಸಿರುವ ದಾಳಿಗಳು ಶೂನ್ಯದಿಂದ ಉದ್ಭವಿಸಿಲ್ಲ ಎನ್ನುವುದನ್ನು ಗುರುತಿಸುವುದೂ ಮುಖ್ಯವಾಗಿದೆ. ಫೆಲೆಸ್ತೀನ್ ಜನರು 56 ವರ್ಷಗಳ ಉಸಿರುಗಟ್ಟಿಸುವ ಅತಿಕ್ರಮಣಕ್ಕೆ ಒಳಗಾಗಿದ್ದಾರೆ’’ ಎಂದು ಗುಟೆರಸ್ ಹೇಳಿದ್ದಾರೆ.
‘‘ತಮ್ಮ ಜಮೀನುಗಳಲ್ಲಿ ನಿರಂತರವಾಗಿ ವಸಾಹತುಗಳು ತಲೆಯೆತ್ತುತ್ತಿರುವುದನ್ನು ಮತ್ತು ಹಿಂಸೆ ಹರಡುವುದನ್ನು ಅವರು ನೋಡಿದ್ದಾರೆ. ಅವರ ಆರ್ಥಿಕತೆ ಏದುಸಿರು ಬಿಡುತ್ತಿದೆ, ಅವರ ಜನರು ನಿರಾಶ್ರಿತರಾಗಿದ್ದಾರೆ ಮತ್ತು ಅವರ ಮನೆಗಳು ನೆಲಸಮವಾಗಿವೆ. ತಮ್ಮ ದುರವಸ್ಥೆಗೆ ರಾಜಕೀಯ ಪರಿಹಾರವೊಂದನ್ನು ಕಂಡುಕೊಳ್ಳುವ ಅವರ ನಿರೀಕ್ಷೆಗಳು ಕಮರಿ ಹೋಗಿವೆ’’ ಎಂದು ಪೋರ್ಚುಗೀಸ್ ರಾಜತಾಂತ್ರಿಕ ಗುಟೆರಸ್ ಹೇಳಿದ್ದಾರೆ.
‘‘ಮಾನ್ಯ ಮಹಾಕಾರ್ಯದರ್ಶಿಯವರೇ, ಯಾವ ಜಗತ್ತಿನಲ್ಲಿ ನೀವು ವಾಸಿಸುತ್ತಿದ್ದೀರಿ?’’ ಎಂದು ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ವಿದೇಶ ಸಚಿವ ಎಲಿ ಕೋಹೆನ್ ಪ್ರಶ್ನಿಸಿದರು. ‘‘ಖಂಡಿತವಾಗಿಯೂ, ಇದು ನಮ್ಮ ಜಗತ್ತಲ್ಲ’’ ಎಂದರು.
ಬಳಿಕ, ಕೋಹೆನ್, ಗುಟೆರಸ್ ಜೊತೆಗಿನ ಖಾಸಗಿ ಭೇಟಿಯನ್ನು ರದ್ದುಗೊಳಿಸಿದರು. ‘‘ನಾನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯನ್ನು ಭೇಟಿಯಾಗುವುದಿಲ್ಲ. ಅಕ್ಟೋಬರ್ 7ರ ಬಳಿಕ, ಸಮತೂಲಿತ ನೀತಿಗೆ ಸ್ಥಾನವಿಲ್ಲ. ಹಮಾಸನ್ನು ಜಗತ್ತಿನಿಂದ ಅಳಿಸಿಹಾಕಬೇಕಾಗಿದೆ’’ ಎಂದು ಇಸ್ರೇಲ್ ವಿದೇಶ ಸಚಿವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಗುಟೆರಸ್ ತಕ್ಷಣ ರಾಜೀನಾಮೆ ನೀಡಬೇಕೆಂದು ಎರ್ಡನ್ ಒತ್ತಾಯಿಸಿದ್ದಾರೆ.