ಫೆಲೆಸ್ತೀನ್ ಅನ್ನು ಒಂದು ದೇಶ ಎಂದು ಮಾನ್ಯ ಮಾಡಿದ ನಾರ್ವೆ, ಸ್ಪೇನ್, ಐರ್ಲ್ಯಾಂಡ್
ಬಾರ್ಸಿಲೋನ: ಐತಿಹಾಸಿಕ ಕ್ರಮವೊಂದರಲ್ಲಿ ನಾರ್ವೇ, ಐರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳು ಇಂದು ಫೆಲಸ್ತೀನ್ ಅನ್ನು ಒಂದು ದೇಶವೆಂದು ಘೋಷಿಸಿವೆ. ಈ ಕ್ರಮ ಫೆಲೆಸ್ತೀನೀಯರ ಹರ್ಷಕ್ಕೆ ಕಾರಣವಾದರೆ ಇಸ್ರೇಲ್ ಅದನ್ನು ಖಂಡಿಸಿದೆ ಹಾಗೂ ನಾರ್ವೇ ಮತ್ತು ಐರ್ಲ್ಯಾಂಡ್‌ನಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿದೆ.
ಮೊದಲಿಗೆ ನಾರ್ವೇ ಪ್ರಧಾನಿ ಜೊನಾಸ್ ಗಹ್ರ್ ಸ್ಟೋರ್ ಅವರು ತಮ್ಮ ರಾಷ್ಟ್ರದ ಪರವಾಗಿ ಘೋಷಣೆ ಮಾಡಿದರಲ್ಲದೆ ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರ ಸ್ಥಾನಮಾನ ದೊರೆಯದ ಹೊರತು ಮಧ್ಯಪೂರ್ವದಲ್ಲಿ ಶಾಶ್ವತ ಶಾಂತಿ ಅಸಾಧ್ಯ ಎಂದು ಹೇಳಿದ್ದರು.
ಮೇ 28ರಿಂದ ನಾರ್ವೇ ದೇಶವು ಫೆಲೆಸ್ತೀನ್ ಅನ್ನು ಒಂದು ದೇಶ ಎಂದು ಅಧಿಕೃತವಾಗಿ ಪರಿಗಣಿಸುವುದು ಎಂದು ಗಹ್ರ್ ಹೇಳಿದ್ದಾರೆ.
ಹಲವು ಯುರೋಪಿಯನ್ ಯೂನಿಯನ್ ದೇಶಗಳೂ ಕಳೆದ ಕೆಲ ವಾರಗಳಲ್ಲಿ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿವೆ ಹಾಗೂ ಎರಡು ರಾಷ್ಟ್ರಗಳ ಪರಿಹಾರವು ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ಅಗತ್ಯ ಎಂದಿದ್ದವು.
ನಾರ್ವೇ ದೇಶವು ಯುರೋಪಿಯನ್ ಯೂನಿಯನ್ ಸದಸ್ಯನಾಗಿರದೇ ಇದ್ದರೂ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಎರಡು ರಾಷ್ಟ್ರ ರಚನೆ ಪರಿಹಾರ ಅಗತ್ಯ ಎಂಬುದನ್ನು ಬಲವಾಗಿ ಸಮರ್ಥಿಸುತ್ತಾ ಬಂದಿದೆ.
ನಾರ್ವೇ ದೇಶದ ಪ್ರಧಾನಿಯ ಹೇಳಿಕೆಯ ಬೆನ್ನಲ್ಲೇ ಐರಿಷ್ ಪ್ರಧಾನಿ ಸೈಮನ್ ಹ್ಯಾರಿಸ್ ಕೂಡ ಇಂತಹುದೇ ಘೋಷಣೆ ಮಾಡಿದರಲ್ಲದೆ ಇಂದು ಫೆಲೆಸ್ತೀನ್ ಮತ್ತು ಐರ್ಲ್ಯಾಂಡ್ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದರು. ಎರಡು ರಾಷ್ಟ್ರ ಪರಿಹಾರದ ಮೂಲಕ ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಅಂತ್ಯ ಹಾಡಲು ಈ ಕ್ರಮ ಸಹಕಾರಿ ಎಂದು ಅವರು ಹೇಳಿದರು.
ಇನ್ನೊಂದು ಬೆಳವಣಿಗೆಯಲ್ಲಿ ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಝ್ ಹೇಳಿಕೆ ನೀಡಿ ತಮ್ಮ ದೇಶ ಮೇ 28ರಿಂದ ಫೆಲೆಸ್ತೀನ್ ಅನ್ನ ಒಂದು ರಾಷ್ಟ್ರವೆಂದು ಪರಿಗಣಿಸುವುದಾಗಿ ತಿಳಿಸಿದರು. ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರ ಮಾನ್ಯತೆಗಾಗಿ ಪೆಡ್ರೋ ಅವರು ಈಗಾಗಲೇ ಹಲವು ಯುರೋಪಿಯನ್ ಮತ್ತು ಮಧ್ಯಪೂರ್ವ ದೇಶಗಳಿಗೆ ಭೇಟಿ ನೀಡಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.