ಕ್ಯೂಬಾ ತೀರ ತಲುಪಿದ ರಶ್ಯದ ಪರಮಾಣು ಶಕ್ತ ಸಬ್‍ಮೆರಿನ್

Update: 2024-06-13 16:42 GMT

PC : NDTV

ಹವಾನ : ಅಮೆರಿಕದ ಜತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಶಕ್ತಿ ಪ್ರದರ್ಶನದ ಸಲುವಾಗಿ ರಶ್ಯದ ಪರಮಾಣುಶಕ್ತ ಸಬ್‍ಮೆರಿನ್ ಹಾಗೂ ನೌಕಾದಳದ ಇತರ ನೌಕೆಗಳು ಬುಧವಾರ ಕಮ್ಯುನಿಸ್ಟ್ ದೇಶ ಕ್ಯೂಬಾದ ಹವಾನಾ ಕಡಲತೀರಕ್ಕೆ ಆಗಮಿಸಿದ್ದು ಐದು ದಿನ ಇಲ್ಲಿ ತಂಗಲಿದೆ ಎಂದು ವರದಿಯಾಗಿದೆ.

ಹವಾನಾವು ಅಮೆರಿಕದ ಫ್ಲೋರಿಡಾ ರಾಜ್ಯಕ್ಕಿಂದ ಸುಮಾರು 145 ಕಿ.ಮೀ ದೂರದಲ್ಲಿದೆ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರದ ಅವಧಿಯಲ್ಲಿ ಕ್ಯೂಬಾವು ಸೋವಿಯತ್ ಯೂನಿಯನ್‍ನ ಪ್ರಮುಖ ಮಿತ್ರನಾಗಿತ್ತು.

ಅತ್ಯಾಧುನಿಕ ಕಝಾನ್ ಸಬ್‍ಮೆರಿನ್‍ನ ಜತೆಗೆ ಅಡ್ಮಿರಲ್ ಗೊರಿಷ್ಕೋವ್ ಸಮರನೌಕೆ, ಒಂದು ತೈಲ ಟ್ಯಾಂಕರ್ (ಹಡಗು) ಹಾಗೂ ಟಗ್ ಕೂಡಾ ಆಗಮಿಸಿದೆ. ಈ ಮಧ್ಯೆ, ಕ್ಯೂಬಾದ ವಿದೇಶಾಂಗ ಸಚಿವ ಬ್ರೂನೊ ರಾಡ್ರಿಗಸ್ ಬುಧವಾರ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್‍ರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಮೇ 9ರಂದು ರಶ್ಯದ ಕೆಂಪುಚೌಕದಲ್ಲಿ ನಡೆದಿದ್ದ ವಾರ್ಷಿಕ ಮಿಲಿಟರಿ ಪರೇಡ್‍ನಲ್ಲಿ ಕ್ಯೂಬಾ ಅಧ್ಯಕ್ಷ ಮಿಗುವೆಲ್ ಡಯಾಝ್- ಕನೆಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News