ಇಸ್ರೇಲನ್ನು ಕಠಿಣವಾಗಿ ಶಿಕ್ಷಿಸಲು ಸಜ್ಜು : ಇರಾನ್

Update: 2024-08-10 16:03 GMT

ಟೆಹ್ರಾನ್ : ಹಮಾಸ್ ಮುಖಂಡರನ್ನು ಟೆಹ್ರಾನ್‍ನಲ್ಲಿ ಹತ್ಯೆ ಮಾಡಿರುವುದಕ್ಕೆ ಇಸ್ರೇಲ್ ಅನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ಸರ್ವೋಚ್ಛ ಮುಖಂಡ ಅಯತೊಲ್ಲಾ ಅಲಿ ಖಾಮಿನೈ ಅವರ ಆದೇಶವನ್ನು ಜಾರಿಗೊಳಿಸಲು ಇರಾನ್ ಸಜ್ಜುಗೊಂಡಿದೆ ಎಂದು ರೆವೊಲ್ಯುಷನರಿ ಗಾಡ್ರ್ಸ್ ಕಮಾಂಡರ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ಅನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ಆದೇಶವನ್ನು ಅತ್ಯುತ್ತಮ ರೀತಿಯಲ್ಲಿ ಕಾರ್ಯಗತಗೊಳಿಸಲಾಗುವುದು ಎಂದವರು ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯಲ್ಲಿ ಇರಾನ್‍ನ ನಿಯೋಗದ ಅಧಿಕಾರಿಗಳು `ಗಾಝಾದಲ್ಲಿ ಶಾಶ್ವತ ಕದನ ವಿರಾಮ ಸ್ಥಾಪನೆ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಹಮಾಸ್ ಒಪ್ಪಿಕೊಳ್ಳುವ ಯಾವುದೇ ಒಪ್ಪಂದ ನಮಗೂ ಸ್ವೀಕಾರಾರ್ಹವಾಗಿದೆ. ತನ್ನ ಇತ್ತೀಚಿನ ಭಯೋತ್ಪಾದಕ ಕೃತ್ಯದ ಮೂಲಕ ಇಸ್ರೇಲ್ ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಯನ್ನು ಉಲ್ಲಂಘಿಸಿದೆ. ಸ್ವರಕ್ಷಣೆಯ ಕಾನೂನುಬದ್ಧ ಹಕ್ಕು ನಮಗಿದೆ. ಆದರೆ ಇದು ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿದ ವಿಷಯವಲ್ಲ' ಎಂದಿದ್ದಾರೆ.

ಇರಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ` ಈ ರೀತಿಯ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಆದರೆ ಈ ವಲಯದಲ್ಲಿ ಇಸ್ರೇಲ್‍ನ ಭದ್ರತೆಗೆ ಅಮೆರಿಕದ ಬಳಿ ಸಾಕಷ್ಟು ಸಂಪನ್ಮೂಲಗಳಿವೆ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News