ಫೆಲೆಸ್ತೀನಿ ಲೇಖಕರು, ಕಲಾವಿದರ ಕಾರ್ಯಕ್ರಮಗಳ ರದ್ದತಿಗೆ 1,300ಕ್ಕೂ ಅಧಿಕ ಸಾಹಿತಿಗಳು, ಪ್ರಕಾಶಕರ ಖಂಡನೆ

Update: 2023-10-21 11:37 GMT

ಫೆಲೆಸ್ತೀನಿ ಲೇಖಕಿ ಅದಾನಿಯಾ ಶಿಬ್ಲಿ (Photo: X/@FonsiLoaiza)

ಹೊಸದಿಲ್ಲಿ: ಇಸ್ರೇಲ್ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಫೆಲೆಸ್ತೀನಿ ಲೇಖಕರು ಮತ್ತು ಕಲಾವಿದರನ್ನೊಳಗೊಂಡ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ವರದಿಗಳು ಹೊರಹೊಮ್ಮುತ್ತಿದ್ದು, ಜಗತ್ತಿನಾದ್ಯಂತದ 1,300ಕ್ಕೂ ಅಧಿಕ ಸಾಹಿತಿಗಳು ಮತ್ತು ಪ್ರಕಾಶಕರು ಅವರನ್ನು ಬೆಂಬಲಿಸಿ ಪತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಕಾರ್ಯಕ್ರಮ ರದ್ದುಗೊಂಡವರಲ್ಲಿ ಫೆಲೆಸ್ತೀನಿ ಲೇಖಕಿ ಅದಾನಿಯಾ ಶಿಬ್ಲಿ ಅವರೂ ಸೇರಿದ್ದಾರೆ ಎಂದು wire.in ವರದಿ ಮಾಡಿದೆ.

ಪತ್ರವು ಅರೆಬಿಕ್‌ನಿಂದ ಅನುವಾದಿತ ಹಲವಾರು ಬರಹಗಳನ್ನು ಪ್ರಕಟಿಸುವ ಅರಬ್‌ಲಿಟ್ ತ್ರೈಮಾಸಿಕ ಮ್ಯಾಗಝಿನ್‌ನ ಪ್ರಯತ್ನವಾಗಿದೆ.

ಇತ್ತೀಚಿನ ಈ ಭಯಾನಕ ದಿನಗಳು ಹಲವಾರು ಐರೋಪ್ಯ ದೇಶಗಳಲ್ಲಿ ಫೆಲೆಸ್ತೀನಿ ಲೇಖಕರು ಮತ್ತು ಕಲಾವಿದರನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿರುವುದಕ್ಕೆ ಸಾಕ್ಷಿಯಾಗುತ್ತಿವೆ ಎಂದು ಅರಬ್‌ಲಿಟ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಪತ್ರದಲ್ಲಿ ಪ್ರಶಸ್ತಿ ವಿಜೇತ ಫೆಲೆಸ್ತೀನಿ ಲೇಖಕಿ ಅಡೆನಿಯಾ ಶಿಬ್ಲಿಯವರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಹಿನ್ನೆಲೆಯಲ್ಲಿ ಶಿಬ್ಲಿ ಪ್ರಶಸ್ತಿಯನ್ನು ಸ್ವೀಕರಿಸಬೇಕಿದ್ದ ಸಮಾರಂಭವನ್ನು ರದ್ದುಗೊಳಿಸಲಾಗಿದೆ.

ತನ್ನ ಕೃತಿ ‘ಮೈನರ್ ಡಿಟೇಲ್(ಅರೆಬಿಕ್‌ನಿಂದ ಇಂಗ್ಲಿಷ್‌ಗೆ ಅನುವಾದ:ಎಲಿಜಾಬೆತ್ ಜಾಕೆಟ್)’ಗಾಗಿ 2020ರ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗಾಗಿ ಫೈನಲಿಸ್ಟ್ ಆಗಿದ್ದ ಶಿಬ್ಲಿ ‘ಐನ್ ನೆಬೆಂಸಾಶೆ ’ ಶೀರ್ಷಿಕೆಯೊಂದಿಗೆ ಜರ್ಮನ್ ಭಾಷೆಗೆ ಅನುವಾದಗೊಂಡಿರುವ ಅದೇ ಕೃತಿಗಾಗಿ ಮುಂದಿನ ವಾರ ಆರಂಭಗೊಳ್ಳಲಿರುವ ಫ್ರಾಂಕ್‌ಫರ್ಟ್ ಬುಕ್ ಫೇರ್‌ನಲ್ಲಿ ಜರ್ಮನಿಯ 2023ರ ಲಿಬೆರಾಟರ್‌ಪ್ರಿಸ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದರು.

ಆದರೆ ಶಿಬ್ಲಿ ಬುಕ್ ಫೇರ್‌ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಪ್ರಶಸ್ತಿಯ ಆಯೋಜಕ ಲಿಟ್‌ಪ್ರಾಮ್ ಅ.13ರಂದು ಹೇಳಿಕೆಯೊಂದರಲ್ಲಿ ತಿಳಿಸಿದೆ. ಲಿಟ್‌ಪ್ರಾಮ್ ಜರ್ಮನ್ ಸರಕಾರ ಮತ್ತು ಫ್ರಾಂಕ್‌ಫರ್ಟ್ ಬುಕ್ ಫೇರ್‌ನಿಂದ ಭಾಗಶಃ ಧನಸಹಾಯವನ್ನು ಪಡೆಯುತ್ತದೆ. ಅಲ್ಲದೆ ಬುಕ್ ಫೇರ್‌ನಲ್ಲಿ ಶಿಬ್ಲಿ ಮತ್ತು ಅವರ ಕೃತಿಯ ಅನುವಾದ ಗುಂಥರ್ ಓರ್ಥ್ ಅವರೊಂದಿಗೆ ಸಾರ್ವಜನಿಕ ಚರ್ಚೆಯನ್ನೂ ರದ್ದುಗೊಳಿಸಲಾಗಿದೆ.

ಶಿಬ್ಲಿಯವರ ಜೊತೆ ಸಮಾಲೋಚಿಸಿ ತಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಲಿಟ್‌ಪ್ರಾಮ್ ಮೂಲ ಹೇಳಿಕೆಯಲ್ಲಿ ತಪ್ಪಾಗಿ ಉಲ್ಲೇಖಿಸಿತ್ತು. ಆದರೆ,ಹೇಳಿಕೆಯನ್ನು ಬಿಡುಗಡೆಗೊಳಿಸುವ ಮುನ್ನ ಲಿಟ್‌ಪ್ರಾಮ್ ತನ್ನೊಂದಿಗೆ ಸಮಾಲೋಚಿಸಿರಲಿಲ್ಲ ಮತ್ತು ನಿರ್ಧಾರವನ್ನು ತೆಗೆದುಕೊಂಡ ಬಳಿಕವಷ್ಟೇ ತನಗೆ ಮಾಹಿತಿ ನೀಡಿತ್ತು ಎಂದು ಶಿಬ್ಲಿ ಹೇಳಿದ್ದಾರೆ.

ತಾವು ಇಸ್ರೇಲ್‌ನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಫ್ರಾಂಕ್‌ಫರ್ಟ್ ಬುಕ್ ಫೇರ್‌ನ ಆಯೋಜಕರು,ಪುಸ್ತಕ ಮೇಳದಲ್ಲಿ ಯಹೂದಿ ಮತ್ತು ಇಸ್ರೇಲಿ ಧ್ವನಿಗಳನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಲು ತಾವು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.

ಫ್ರಾನ್ಸ್‌ನಲ್ಲಿ ನಡೆಯಬೇಕಿದ್ದ ಹಸನ್ ಅಬ್ದುಲ್‌ರಝಾಕ್ ಅವರ ‘ಆ್ಯಂಡ್ ಹಿಯರ್ ಐ ಆ್ಯಮ್’ ನಾಟಕ ಪ್ರದರ್ಶನವನ್ನು ರದ್ದುಗೊಳಿಸಿದ್ದನ್ನೂ ಸಾಹಿತಿಗಳು ಮತ್ತು ಪ್ರಕಾಶಕರ ಪತ್ರವು ಖಂಡಿಸಿದೆ.

ಇದೇ ರೀತಿ ನಾಥನ್ ಥ್ರಾಲ್ ಅವರ ‘ಎ ಡೇ ಇನ್ ದಿ ಲೈಫ್ ಆಫ್ ಅಬೆದ್ ಸಲಮಾ ’ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ‘ಭದ್ರತಾ ಕಳವಳಗಳಿಂದಾಗಿ ’ರದ್ದುಗೊಳಿಸಲಾಗಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್‌ರಝಾಕ್ ಗುರ್ನಾ,ಆ್ಯನ್ನೀ ಎರ್ನಾಕ್ಸ್ ಮತ್ತು ಓಲ್ಗಾ ಟೋಕರ್ಜಕ್,ಬೂಕರ್ ಪ್ರಶಸ್ತಿ ವಿಜೇತರಾದ ಆ್ಯನ್ನೀ ಎನ್‌ರೈಟ್, ರಿಚರ್ಡ್ ಫ್ಲನಗನ್ ಮತ್ತು ಇಯಾನ್ ಮೆಕ್‌ಇವಾನ್ ಮತ್ತಿತರರು ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News