ಪಾಕ್: ಸೇನಾ ಮಸೂದೆ ಅಂಗೀಕಾರ; ತಾನು ಸಹಿ ಹಾಕಿಲ್ಲ ಎಂದ ಅಧ್ಯಕ್ಷ ಆಲ್ವಿ
ಇಸ್ಲಮಾಬಾದ್: ಮಹತ್ವದ `ಪಾಕಿಸ್ತಾನ ಸೇನೆ(ತಿದ್ದುಪಡಿ) ಮಸೂದೆ ಹಾಗೂ ಸರಕಾರಿ ರಹಸ್ಯ ಮಸೂದೆಗೆ ಅಂಗೀಕಾರ ದೊರಕಿದ್ದು ಈ ಎರಡೂ ಮಸೂದೆಗಳು ದೇಶದಲ್ಲಿ ಕಾಯ್ದೆಯ ರೂಪ ಪಡೆದಿವೆ ಎಂದು ಪಾಕಿಸ್ತಾನದ ಸರಕಾರ ಘೋಷಿಸಿದೆ. ಆದರೆ ಈ ಎರಡೂ ಮಸೂದೆಗಳಿಗೆ ತಾನು ಸಹಿಯೇ ಹಾಕಿಲ್ಲ ಎಂದು ಅಧ್ಯಕ್ಷ ಆರಿಫ್ ಆಲ್ವಿ ಹೇಳಿಕೆ ನೀಡಿದ್ದು ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ಎರಡೂ ಮಸೂದೆಗಳನ್ನು ಒಪ್ಪದ ಕಾರಣ ಸಹಿ ಹಾಕಿಲ್ಲ. ದೇವರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಎರಡೂ ಮಸೂದೆಗಳನ್ನು ನಿಗದಿತ ಅವಧಿಯೊಳಗೆ ಸಹಿ ಇಲ್ಲದೆ ವಾಪಾಸು ಕಳುಹಿಸುವಂತೆ ನನ್ನ ಸಿಬ್ಬಂದಿಗಳಿಗೆ ಸೂಚಿಸಿದ್ದೆ. (ನಿಗದಿತ ಅವಧಿಯೊಳಗೆ ಅಧ್ಯಕ್ಷರ ಸಹಿಯಿಲ್ಲದೆ ಮಸೂದೆ ವಾಪಾಸು ಬಂದರೆ ನಿಷ್ಪಲವಾಗುತ್ತದೆ). ನಿಗದಿತ ಅವಧಿಯೊಳಗೆ ವಾಪಾಸು ಕಳುಹಿಸುವಂತೆ ಸಿಬಂದಿಗಳಿಗೆ ಹಲವು ಬಾರಿ ನೆನಪಿಸಿದಾಗಲೂ ಅವರು ವಾಪಾಸು ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ ನನ್ನ ಕಚೇರಿಯ ಸಿಬ್ಬಂದಿ ನನ್ನ ಆಶಯ ಮತ್ತು ಆದೇಶವನ್ನು ಕಡೆಗಣಿಸಿರುವುದು ಇವತ್ತು ತಿಳಿದುಬಂದಿದೆ. ಎಲ್ಲವನ್ನೂ ತಿಳಿದಿರುವ ಅಲ್ಲಾ ಕ್ಷಮಿಸಬಹುದು. ಆದರೆ ಈ ಮಸೂದೆಯಿಂದ ಪರಿಣಾಮಕ್ಕೆ ಒಳಗಾಗುವವರಿಂದ ನಾನು ಕ್ಷಮೆ ಯಾಚಿಸುತ್ತೇನೆ' ಎಂದು ಅಧ್ಯಕ್ಷರು ಹೇಳಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯ ಅನುಮೋದನೆ ದೊರೆತ ಬಳಿಕ ಈ ಮಸೂದೆಗಳನ್ನು ಸೆನೆಟ್‍ನಲ್ಲಿ ಮಂಡಿಸಲಾಗಿತ್ತು. ಆದರೆ ಮಸೂದೆಯ ಬಗ್ಗೆ ಹಲವು ಸದಸ್ಯರಿಂದ ಟೀಕೆ ಎದುರಾದ ಹಿನ್ನೆಲೆಯಲ್ಲಿ ಇವುಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಸೆನೆಟ್‍ನ ಅಧ್ಯಕ್ಷರು ವರ್ಗಾಯಿಸಿದ್ದರು. ಕೆಲವು ಬದಲಾವಣೆಗಳೊಂದಿಗೆ ಮಸೂದೆಯನ್ನು ಮತ್ತೆ ಸೆನೆಟ್‍ನಲ್ಲಿ ಮಂಡಿಸಿ, ಅನುಮೋದನೆ ಪಡೆದು ಅಧ್ಯಕ್ಷರ ಸಹಿಗಾಗಿ ಪಾಕಿಸ್ತಾನದ ಅಧ್ಯಕ್ಷರಿಗೆ ಸಲ್ಲಿಸಲಾಗಿತ್ತು. ಆದರೆ ಅಧ್ಯಕ್ಷರು ಸಹಿ ಹಾಕದಿದ್ದರೂ, ಅಧ್ಯಕ್ಷರ ಕಚೇರಿಯಿಂದ ನಡೆದ ತಾಂತ್ರಿಕ ದೋಷದ ಕಾರಣ ಮಸೂದೆ ಕಾನೂನಿನ ರೂಪ ತಳೆದಿದೆ.
ಸರಕಾರಿ ರಹಸ್ಯ ಕಾಯ್ದೆಯ ಪ್ರಕಾರ ಓರ್ವ ವ್ಯಕ್ತಿ ಉದ್ದೇಶಪೂರ್ವಕವಾಗಿ ಕಾನೂನು ಸುವ್ಯಸ್ಥೆಯ ಸಮಸ್ಯೆ ಸೃಷ್ಟಿಸಿದರೆ ಅಥವಾ ಸರಕಾರದ ವಿರುದ್ದ ಕಾರ್ಯ ನಿರ್ವಹಿಸಿದರೆ ಅಪರಾಧವಾಗುತ್ತದೆ'. ನಿಷೇಧಿತ ಸ್ಥಳದ ಮೇಲೆ ದಾಳಿ ನಡೆಸುವುದು ಅಥವಾ ಹಾನಿಗೊಳಿಸುವುದು ಹಾಗೂ ಶತ್ರುಗಳಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದ್ದರೆ ಆಗಲೂ ಶಿಕ್ಷೆ ವಿಧಿಸಬಹುದು. ಸೇನಾ ಕಾಯ್ದೆಯ ಪ್ರಕಾರ ರಕ್ಷಣಾ ಪಡೆಯ ಯಾವುದೇ ಸಿಬಂದಿ ನಿವೃತ್ತನಾದ, ರಾಜೀನಾಮೆ ನೀಡಿದ ಅಥವಾ ವಜಾಗೊಂಡ 2 ವರ್ಷಗಳ ವರೆಗೆ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ'. ಸೇವೆಯಲ್ಲಿರುವ ಅಥವಾ ನಿವೃತ್ತನಾದ ಅಧಿಕಾರಿ ಸೇನೆಯ ಹೆಸರು ಕೆಡಿಸುವ ಅಥವಾ ಸೇನೆಯ ವಿರುದ್ಧ ದ್ವೇಷ ಪ್ರಸಾರದ ಕೃತ್ಯದಲ್ಲಿ ತೊಡಗಿದರೆ 2 ವರ್ಷ ಜೈಲುಶಿಕ್ಷೆಯ ಜತೆಗೆ ದಂಡ ವಿಧಿಸಬಹುದಾಗಿದೆ.