ಪಾಕಿಸ್ತಾನ: 'ಸರ್ಕಾರ ರಚನೆ'ಗಾಗಿ ಇಮ್ರಾನ್ ನಿಷ್ಠರಿಂದ ಮೈತ್ರಿಕೂಟ
ಇಸ್ಲಾಮಾಬಾದ್: ಕಾರಾಗೃಹದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನಿಷ್ಠರಾಗಿರುವ ಪಕ್ಷೇತರರು ಅಷ್ಟೊಂದು ಪರಿಚಿತವಲ್ಲದ ರಾಜಕೀಯ ಗುಂಪಿನ ಜತೆಗೆ ಮೈತ್ರಿಕೂಟ ರಚಿಸಿಕೊಂಡು ಸರ್ಕಾರ ರಚಿಸುವ ಪ್ರಯತ್ನ ನಡೆಸಿದ್ದಾರೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮತ್ತು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಸಂಬಂಧ ದೇಶದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.
ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಬೆಂಬಲಿಗ ಪಕ್ಷೇತರರು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದರೂ, ಇವರು ಪಕ್ಷೇತರರು ಎಂಬ ಕಾರಣಕ್ಕೆ ಮೂಲೆಗುಂಪಾಗಿದ್ದಾರೆ.
ಸೇನೆಯ ಬೆಂಬಲವಿರುವ ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಬಹುಮತ ಪಡೆಯಲು ವಿಫಲವಾಗಿದ್ದು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಜತೆಗೆ ಇತರ ಸಣ್ಣ ಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸುವ ಪ್ರಯತ್ನದಲ್ಲಿದೆ.
ಆದರೆ ನೋಂದಾಯಿತ ರಾಜಕೀಯ ಪಕ್ಷವಾದ ಸುನ್ನಿ ಇತ್ತಿಹಾದ್ ಕೌನ್ಸಿಲ್ (ಎಸ್ಐಸಿ) ಜತೆ ತಮ್ಮ ಪಕ್ಷದ ಬೆಂಬಲದಿಂದ ಗೆದ್ದ ಎಲ್ಲ ಪ್ರತಿನಿಧಿಗಳು ಕೈಜೋಡಿಸಲಿದ್ದಾರೆ ಎಂದು ಹೇಳಿರುವ ಪಿಟಿಐ, ಸದನದಲ್ಲಿ ಬಹುಮತ ಗಳಿಸುವ ವಿಶ್ವಾಸದಲ್ಲಿದೆ. ಈ ಪಕ್ಷದ ಅಧ್ಯಕ್ಷರು ಇಸ್ಲಾಮಿಕ್ ರಜಕೀಯ ಮತ್ತು ಧಾರ್ಮಿಕ ಪಕ್ಷಗಳ ಗುಂಪಿನಿಂದ ಗೆದ್ದ ಏಕೈಕ ಅಭ್ಯರ್ಥಿ ಎನಿಸಿಕೊಂಡಿದ್ದರು.
"ಪ್ರಾಂತೀಯ ಮತ್ತು ರಾಷ್ಟ್ರೀಯ ಅಸೆಂಬ್ಲಿಗಳ ಸಂಬಂಧ ನಾವು ಒಮ್ಮತಕ್ಕೆ ಬಂದಿದ್ದೇವೆ. ಎಲ್ಲ ಪಕ್ಷೇತರ ಪ್ರತಿನಿಧಿಗಳು ಎಸ್ಐಸಿ ಸೇರಲಿದ್ದಾರೆ ಎಂದು ಪಿಟಿಐ ಅಧ್ಯಕ್ಷ ಗೊಹರ್ ಅಲಿ ಖಾನ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಿಟಿಐ ಬೆಂಬಲದಿಂದ ಗೆದ್ದ ಎಲ್ಲ ಪಕ್ಷೇತರ ಸದಸ್ಯರು ಎಸ್ಐಸಿ ಸೇರುವ ಸಂಬಂಧ ತಮ್ಮ ಅರ್ಜಿಗಳನ್ನು ಚುನಾವಣಾ ಆಯೋಗಕ್ಕೆ ಈ ವಾರ ಕಳುಹಿಸಲಿದ್ದಾರೆ. ಆಗ ಆಯೋಗ ಈ ಮೈತ್ರಿಕೂಟಕ್ಕೆ ಅನುಮೋದನೆ ನೀಡಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆಯೋಗ ಈ ಪ್ರಸ್ತಾವಕ್ಕೆ ಸಹಿ ಮಾಡಿದರೆ, ಈ ಮೈತ್ರಿಕೂಟವು ಮಹಿಳೆಯರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಚುನಾವಣಾ ಫಲಿತಾಂಶಕ್ಕೆ ಅನುಗುಣವಾಗಿ ತನ್ನ ಪಾಲು ಪಡೆಯಲಿದೆ.