ಪಾಕ್: ಸಾರ್ವತ್ರಿಕ ಚುನಾವಣೆ ವಿಳಂಬ ಸಾಧ್ಯತೆ
Pakistan: General election likely to be delayed
ಇಸ್ಲಮಾಬಾದ್: ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಮುಂದಿನ ವರ್ಷದ ಮಾರ್ಚ್ ವರೆಗೆ ವಿಳಂಬಿಸುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ.
ಕೌನ್ಸಿಲ್ ಆಫ್ ಕಾಮನ್ ಇಂಟರೆಸ್ಟ್(ಸಿಸಿಐ) ಹೊಸ ಜನಗಣತಿಯನ್ನು ಅನುಮೋದಿಸಿದ ಬಳಿಕ ಪಾಕಿಸ್ತಾನದ ಚುನಾವಣಾ ಆಯೋಗವು ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕಾಗಿದೆ. ಕ್ಷೇತ್ರಗಳ ಮರುವಿಂಗಡಣೆ ಮಾಡಿದರೆ ಸಾರ್ವತ್ರಿಕ ಚುನಾವಣೆ ಮುಂದಿನ ವರ್ಷದ ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ಪ್ರಥಮ ವಾರ ನಡೆಯಬಹುದು ಎಂದು ಸಚಿವರನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ಮಂಗಳವಾರ ವರದಿ ಮಾಡಿದೆ.
ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಶನಿವಾರ ನಡೆದ ಸಿಸಿಐ ಸಭೆಯಲ್ಲಿ ಹೊಸ ಡಿಜಿಟಲ್ ಜನಗಣತಿಯನ್ನು ಸರ್ವಾನುಮತದಿಂದ ಅನುಮೋದಿಸಿರುವುದರಿಂದ ಚುನಾವಣಾ ಆಯೋಗವು ಈ ಗಣತಿಯನ್ನು ಆಧರಿಸಿ ಚುನಾವಣೆ ನಡೆಸಬೇಕಾಗಿದೆ. `ಶನಿವಾರ ನಡೆದ ಸಿಸಿಐ ಸಭೆಯಲ್ಲಿ ಎಲ್ಲಾ 4 ಪ್ರಾಂತಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಮತದ ನಿರ್ಧಾರ ಕೈಗೊಂಡಿರುವುದರಿಂದ, ಕ್ಷೇತ್ರಗಳ ಮರುವಿಂಗಡಣೆ ಸಾಂವಿಧಾನಿಕ ಬದ್ಧತೆಯಾಗಿದೆ. ಸಂವಿಧಾನದ ಪ್ರಕಾರ, ಒಂದು ಜನಗಣತಿಯ ಆಧಾರದಲ್ಲಿ 2 ಸಾರ್ವತ್ರಿಕ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೊಸ ಜನಗಣತಿಯ ಫಲಿತಾಂಶವನ್ನು ಪ್ರಕಟಿಸಿದ ಬಳಿಕ ಕ್ಷೇತ್ರಗಳ ಮರುವಿಂಗಡಣೆ ಕಡ್ಡಾಯವಾಗಿದೆ' ಎಂದು ಸನಾವುಲ್ಲಾ ಹೇಳಿದ್ದಾರೆ. ಈ ಮಧ್ಯೆ, ಉಸ್ತುವಾರಿ ಪ್ರಧಾನಿಯ ಆಯ್ಕೆ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಸಹಮತ ಮೂಡಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ.