ಪಾಕ್: ಚೀನಾ ಇಂಜಿನಿಯರ್ ಗಳ ವಾಹನದ ಮೇಲೆ ಉಗ್ರರ ದಾಳಿ
ಪೇಷಾವರ: ಪಾಕಿಸ್ತಾನದ ಬಲೋಚಿಸ್ತಾನದಲ್ಲಿ ಚೀನಾದ ಇಂಜಿನಿಯರ್ ಗಳು ಪ್ರಯಾಣಿಸುತ್ತಿದ್ದ ವಾಹನಗಳನ್ನು ಗುರಿಯಾಗಿಸಿ ರವಿವಾರ ಭಯೋತ್ಪಾದಕ ದಾಳಿ ನಡೆದಿದ್ದು 4 ಚೀನೀ ಪ್ರಜೆಗಳು ಹಾಗೂ 9 ಮಂದಿ ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿ ನಡೆಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ ಎಂದು `ದಿ ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.
ಬಲೋಚಿಸ್ತಾನದ ಗ್ವದರ್ ಪೊಲೀಸ್ ಠಾಣೆಯ ಬಳಿ ಚೀನಾದ 23 ಇಂಜಿನಿಯರ್ಗಳು ಪ್ರಯಾಣಿಸುತ್ತಿದ್ದ ವಾಹನಗಳ ಸಾಲಿನ ಮೇಲೆ ಸುಧಾರಿತ ಸ್ಫೋಟಕ ಸಾಧನ ಬಳಸಿ ಇಬ್ಬರು ಉಗ್ರರು ದಾಳಿ ನಡೆಸಿದ್ದು ಚೀನಾದ 4 ಹಾಗೂ ಪಾಕಿಸ್ತಾನದ 9 ನಾಗರಿಕರು ಮೃತಪಟ್ಟಿದ್ದಾರೆ. ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ವರದಿ ಹೇಳಿದೆ.
60 ಶತಕೋಟಿ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಯೋಜನೆಯ ಕಾಮಗಾರಿಯ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಬಲೋಚಿಸ್ತಾನ ಪ್ರಾಂತದ ಬಂದರು ನಗರ ಗ್ವದರ್ನಲ್ಲಿ ಭಾರೀ ಪ್ರಮಾಣದ ಚೀನಾ ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ. ಈ ವಲಯದಲ್ಲಿ ನಡೆಯುವ ಮೂಲಸೌಕರ್ಯ ಯೋಜನೆಯಲ್ಲಿ ಚೀನಾದ ಹೂಡಿಕೆಯನ್ನು ವಿರೋಧಿಸುವ `ದಿ ಬಲೋಚಿಸ್ತಾನ್ ಲಿಬರೇಷನ್ ಆರ್ಮಿ'(ಬಿಎಲ್ಎ) ಈ ದಾಳಿಯ ಹೊಣೆಯನ್ನು ವಹಿಸಿಕೊಂಡಿದೆ. `ಬಿಎಲ್ಎ ಮಜೀದ್ ಬ್ರಿಗೇಡ್ ಗ್ವದರ್ನಲ್ಲಿ ಚೀನೀ ಇಂಜಿನಿಯರ್ಗಳ ವಾಹನ ಸಾಲಿನ ಮೇಲೆ ದಾಳಿ ನಡೆಸಿದ್ದು ದಾಳಿ ಈಗಲೂ ಮುಂದುವರಿದಿದೆ' ಎಂದು ಪ್ರತ್ಯೇಕತಾವಾದಿ ಸಂಘಟನೆಯ ಹೇಳಿಕೆ ತಿಳಿಸಿದೆ.