ಪಾಕಿಸ್ತಾನ: ಆ.9ರಂದು ಸಂಸತ್ ವಿಸರ್ಜನೆ
ಇಸ್ಲಮಾಬಾದ್, ಆ.4: ಆಗಸ್ಟ್ 9ರಂದು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಘೋಷಿಸಿದ್ದಾರೆ.
ಗುರುವಾರ ಸಂಸತ್ ಸದಸ್ಯರ ಗೌರವಾರ್ಥ ಆಯೋಜಿಸಿದ್ದ ಔತಣಕೂಟದಲ್ಲಿ ಸಂಸದೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಪಾಕ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಉಸ್ತುವಾರಿ ವ್ಯವಸ್ಥೆ, ಉಸ್ತುವಾರಿ ಪ್ರಧಾನಿ ನೇಮಕದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದು ಎಲ್ಲಾ ಸದಸ್ಯರ ಬೆಂಬಲವನ್ನು ಶರೀಫ್ ಕೋರಿದರು.
ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸುವಂತೆ ಔಪಚಾರಿಕ ಸಲಹೆಯನ್ನು ಆಗಸ್ಟ್ 9ರಂದು ಅಧ್ಯಕ್ಷರಿಗೆ ಸಲ್ಲಿಸಲಾಗುವುದು. ಸಂವಿಧಾನದ ಅಂಶಗಳ ಪ್ರಕಾರ, ಇದಕ್ಕೆ 48 ಗಂಟೆಗಳೊಳಗೆ ಅಧ್ಯಕ್ಷರು ಸಹಿ ಹಾಕಬೇಕು.
ಯಾವುದೇ ಕಾರಣಕ್ಕೆ ಅಧ್ಯಕ್ಷರು ಸಹಿ ಹಾಕದಿದ್ದರೂ ಸಂಸತ್ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ವಿಪಕ್ಷಗಳ ಜತೆ ಸಮಾಲೋಚಿಸಿದ ಬಳಿಕ ಉಸ್ತುವಾರಿ ಪ್ರಧಾನಿಯ ಹೆಸರನ್ನು ಅಧ್ಯಕ್ಷರಿಗೆ ಸಲ್ಲಿಸಲಾಗುವುದು. ಮುಂಬರುವ ಚುನಾವಣೆಯು 2023ರಲ್ಲಿ ನಡೆದ ಡಿಜಿಟಲ್ ಜನಗಣತಿಯ ಆಧಾರದಲ್ಲಿ ನಡೆಯಲಿದೆ ಎಂದು ಶರೀಫ್ ಹೇಳಿದ್ದಾರೆ. ಒಂದು ವೇಳೆ ಈ ವಿಷಯದಲ್ಲಿ ಸಹಮತ ಮೂಡದಿದ್ದರೆ ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಸ್ತಾವಿತ ಹೆಸರುಗಳಲ್ಲಿ ಒಂದನ್ನು ಅಂತಿಮಗೊಳಿಸಲಿದೆ ಎಂದು ವರದಿ ಹೇಳಿದೆ.