ಪಾಕಿಸ್ತಾನ | ಕರೆನ್ಸಿ ನೋಟಿನಲ್ಲಿ ಭುಟ್ಟೋ ಫೋಟೋ ಮುದ್ರಿಸಲು ಆಗ್ರಹ

Update: 2024-05-13 16:44 GMT

Former Pakistan PM Zulfikar Ali Bhutto (Photo/X @NazBaloch_)

ಲಾಹೋರ್: ಪಕ್ಷದ ಸಂಸ್ಥಾಪಕ, ಮಾಜಿ ಪ್ರಧಾನಿ ಝುಲ್ಫಿಕರ್ ಆಲಿ ಭುಟ್ಟೋರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಹೀರೊ ಎಂದು ಘೋಷಿಸಿ ಅವರ ಭಾವಚಿತ್ರವನ್ನು ಕರೆನ್ಸಿ ನೋಟಿನಲ್ಲಿ ಮುದ್ರಿಸುವಂತೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಫೆಡರಲ್ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಅಂಗೀಕರಿಸಿದೆ ಎಂದು ಎಆರ್‍ವೈ ನ್ಯೂಸ್ ಸೋಮವಾರ ವರದಿ ಮಾಡಿದೆ.

`ಭುಟ್ಟೋ ಉಲ್ಲೇಖ ಮತ್ತು ಇತಿಹಾಸ' ಎಂಬ ಹೆಸರಿನ ವಿಚಾರ ಸಂಕಿರಣದಲ್ಲಿ ಅನುಮೋದಿಸಲಾದ ನಿರ್ಣಯದಲ್ಲಿ ಝುಲ್ಫಿಕರ್ ಭುಟ್ಟೋಗೆ ದೇಶದ ಅತ್ಯುನ್ನತ ನಾಗರಿಕ ಗೌರವ `ನಿಶಾನೆ ಪಾಕಿಸ್ತಾನ'ವನ್ನು ನೀಡುವಂತೆ ಫೆಡರಲ್ ಸರಕಾರವನ್ನು ಆಗ್ರಹಿಸಲಾಗಿದ್ದು, ಝುಲ್ಫಿಕರ್ ಭುಟ್ಟೋ ಅವರಿಗೆ ಮರಣದಂಡನೆ ಶಿಕ್ಷೆಗೆ ಕಾರಣವಾದ ವಿಚಾರಣೆ ನ್ಯಾಯಸಮ್ಮತವಾಗಿರಲಿಲ್ಲ ಎಂಬ ಸುಪ್ರೀಂಕೋರ್ಟ್ ನಿರ್ಣಯವನ್ನು ಶ್ಲಾಘಿಸಲಾಗಿದೆ. ಜತೆಗೆ, ಭುಟ್ಟೋ ಅವರ ಭಾವಚಿತ್ರವನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸಲು, ಭುಟ್ಟೋ ಗೌರವಾರ್ಥ ಸ್ಮಾರಕವನ್ನು ನಿರ್ಮಿಸಲು ಹಾಗೂ ಅವರ ಸಮಾಧಿಯನ್ನು ರಾಷ್ಟ್ರೀಯ ಪವಿತ್ರ ಸ್ಥಳವೆಂದು ಘೋಷಿಸುವಂತೆ ಆಗ್ರಹಿಸಲಾಗಿದೆ. ಭುಟ್ಟೋಗೆ ನೀಡಲಾದ ಅನ್ಯಾಯದ ಮರಣದಂಡನೆ ಶಿಕ್ಷೆಯನ್ನು ಬದಲಾಯಿಸಲು ಮತ್ತು ಪ್ರಜಾಪ್ರಭುತ್ವಕ್ಕಾಗಿ ತನ್ನ ಜೀವವನ್ನು ಮುಡಿಪಾಗಿಟ್ಟ ಪ್ರಜಾಪ್ರಭುತ್ವ ಕಾರ್ಯಕರ್ತರಿಗೆ `ಝುಲ್ಫಿಕರ್ ಆಲಿ ಭುಟ್ಟೋ ಪುರಸ್ಕಾರ' ಸ್ಥಾಪಿಸುವಂತೆ ಒತ್ತಾಯಿಸಲಾಗಿದೆ.

ಝುಲ್ಫಿಕರ್ ಭುಟ್ಟೋ ಅವರ ವಿಚಾರಣೆಯನ್ನು ನ್ಯಾಯಾಂಗ ಹತ್ಯೆ ಎಂದು ಘೋಷಿಸುವ ನಿರ್ಣಯವನ್ನು ಮಾರ್ಚ್‍ನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಅನುಮೋದಿಸಿತ್ತು. ಭುಟ್ಟೋಗೆ ವಿಧಿಸಲಾಗಿದ್ದ ವಿವಾದಾತ್ಮಕ ಮರಣದಂಡನೆ ಶಿಕ್ಷೆಯ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ `ಮಾಜಿ ಪ್ರಧಾನಿಗೆ ನ್ಯಾಯಸಮ್ಮತ ವಿಚಾರಣೆಯ ಅವಕಾಶ ನಿರಾಕರಿಸಲಾಗಿತ್ತು' ಎಂದು ಹೇಳಿತ್ತು. ಮಾಜಿ ಅಧ್ಯಕ್ಷ ಝಿಯಾ ಉಲ್ ಹಕ್ ಆಡಳಿತದ ಸಂದರ್ಭ ಭುಟ್ಟೋಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News