ಪಾಕಿಸ್ತಾನ: ಉಸ್ತುವಾರಿ ಸಂಪುಟದಲ್ಲಿ ಯಾಸಿನ್ ಮಲಿಕ್ ಪತ್ನಿಗೆ ಸ್ಥಾನ
Update: 2023-08-17 18:29 GMT
ಇಸ್ಲಮಾಬಾದ್: ಸಾರ್ವತ್ರಿಕ ಚುನಾವಣೆಗೂ ಮುನ್ನ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್-ಹಕ್ 18 ಸದಸ್ಯರ ಉಸ್ತುವಾರಿ ಸಚಿವ ಸಂಪುಟವನ್ನು ರಚಿಸಿದ್ದು ಇದರಲ್ಲಿ ಜಮ್ಮು-ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ, ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಪತ್ನಿ ಮುಷಾಲ್ ಹುಸೇನ್ ಕೂಡಾ ಸೇರಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಅಮೆರಿಕಕ್ಕೆ ಪಾಕಿಸ್ತಾನದ ಮಾಜಿ ರಾಯಭಾರಿ ಜಲೀಲ್ ಅಬ್ಬಾಸ್ ಜಿಲಾನಿ ವಿದೇಶಾಂಗ ಸಚಿವರಾಗಿ, ಸೆಂಟ್ರಲ್ ಬ್ಯಾಂಕ್ನ ಮಾಜಿ ಮುಖ್ಯಸ್ಥ ಶಂಸದ್ ಅಖ್ತರ್ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಷಾಲ್ `ಮಾನವ ಹಕ್ಕುಗಳ ವಿಷಯದಲ್ಲಿ ಪ್ರಧಾನಿಗೆ ವಿಶೇಷ ಸಲಹೆಗಾರ'ರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿ ಹೇಳಿದೆ. ಯಾಸಿನ್ ಮಲಿಕ್ನನ್ನು ಭಾರತದ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದೆ.