ಕಿರ್ಗಿಸ್ಥಾನದಿಂದ ಸ್ವದೇಶಕ್ಕೆ ಮರಳಿದ ಪಾಕ್ ವಿದ್ಯಾರ್ಥಿಗಳು
ಇಸ್ಲಾಮಾಬಾದ್: ಕಿರ್ಗಿಸ್ಥಾನದ ರಾಜಧಾನಿ ಬಿಷ್ಕೆಕ್‍ನಲ್ಲಿ ವಿದೇಶೀಯರ ಮೇಲೆ ಗುಂಪು ಹಲ್ಲೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರ 140 ವಿದ್ಯಾರ್ಥಿಗಳನ್ನು ಅಲ್ಲಿಂದ ವಾಪಾಸು ಕರೆಸಿಕೊಂಡಿದೆ.
ಪಾಕ್ ವಿದ್ಯಾರ್ಥಿಗಳ ಪ್ರಥಮ ತಂಡವನ್ನು ಕರೆತಂದ ವಿಶೇಷ ವಿಮಾನವು ಲಾಹೋರ್ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಬಂದಿಳಿದಿದೆ. ಕಿರ್ಗಿಸ್ಥಾನದಲ್ಲಿರುವ ಪಾಕ್ ಪ್ರಜೆಗಳು ಸ್ವದೇಶಕ್ಕೆ ಮರಳಲು ಬಯಸಿದರೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಕಿರ್ಗಿಸ್ಥಾನದಿಂದ ಸ್ವದೇಶಕ್ಕೆ ಮರಳಲು ಬಯಸುವ ಪಾಕ್ ಪ್ರಜೆಗಳ ಪ್ರಯಾಣ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಹೇಳಿದ್ದಾರೆ.
ಕಿರ್ಗಿಸ್ಥಾನದ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲು ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ನೆರವು ಒದಗಿಸಲು ಉಪಪ್ರಧಾನಿ ಇಷಾಖ್ ದಾರ್ ಸೇರಿದಂತೆ ಇಬ್ಬರು ಸದಸ್ಯರ ನಿಯೋಗವನ್ನು ರವಾನಿಸಲಾಗುವುದು ಎಂದು ಷರೀಫ್ ಹೇಳಿದ್ದಾರೆ.
ಈ ಮಧ್ಯೆ, ದೇಶದಲ್ಲಿ ಪರಿಸ್ಥಿತಿ ಶಾಂತವಾಗಿದ್ದು ನಿಯಂತ್ರಣದಲ್ಲಿದೆ ಎಂದು ಕಿರ್ಗಿಸ್ಥಾನ ಸರಕಾರ ಹೇಳಿದೆ.