ಇಸ್ರೇಲ್ ಸೇನೆಯಿಂದ ಫೆಲೆಸ್ತೀನ್ ಹೋರಾಟಗಾರ್ತಿ ತಾಮಿಮಿ ಬಂಧನ

Update: 2023-11-07 18:27 GMT

Photo: NDTV

ಜೆರುಸಲೇಂ: ಫೆಲೆಸ್ತೀನ್‌ನ ಮಾನವಹಕ್ಕುಗಳ ಹೋರಾಟಗಾರ್ತಿ 22 ವರ್ಷ ವಯಸ್ಸಿನ ಅಹೆದ್ ತಾಮಿಮಿ ಅವರನ್ನು ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲಿ ಸೇನೆ ಸೋಮವಾರ ಬಂಧಿಸಿದೆ.

‘‘ ರಮಲ್ಲಾ ನಗರದ ಸಮೀಪದ ನಬಿ ಸಾಲಿಹ್ ಪಟ್ಟಣದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಹೆದ್ ತಾಮಿಮಿ ಅವರನ್ನು ಬಂಧಿಸಲಾಗಿದೆ ’’ ಎಂದು ಇಸ್ರೇಲಿ ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಹಾಗೂ ದ್ವೇಷಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂಬ ಶಂಕೆಯಲ್ಲಿ ಬಂಧಿತರಾದ ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಯ ಸಂದರ್ಭ ತಾಮಿಮಿ ಅವರನ್ನು ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ತಾಮಿಮಿ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಸಾರ ಮಾಡಿದ ಪೋಸ್ಟ್ ಒಂದರಲ್ಲಿ ಹಿಟ್ಲರ್‌ನನ್ನು ಉಲ್ಲೇಖಿಸಿ ಪ್ರಚೋದನಕಾರಿ ಪದಗಳೊಂದಿಗೆ ಇಸ್ರೇಲಿಗರ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು ಎಂದು ಇಸ್ರೇಲ್ ಸೇನೆ ಆರೋಪಿಸಿದೆ.

ಆದರೆ ಹೋರಾಟಗಾರ್ತಿಯ ತಾಯಿ ಸಾರಿಮನ್ ಅಲ್ ತಾಮಿಮಿ ಅವರು ಈ ಪೋಸ್ಟ್ ಅನ್ನು ತಾಮಿಮಿ ಬರೆದಿಲ್ಲವೆಂದು ಹೇಳಿದ್ದಾರೆ. ತಾಮಿಮಿ ಅವರ ಹೆಸರು ಹಾಗೂ ಭಾವಚಿತ್ರವಿರುವ ಹಲವಾರು ಇನ್‌ಸ್ಟಾಗ್ರಾಂ ಪೇಜ್‌ಗಳಿದ್ದು, ಅವುಗಳೊಂದಿಗೆ ಆಕೆಗೆ ಯಾವುದೇ ನಂಟಿಲ್ಲವೆಂದು ಸಾರಿಮನ್ ಅಲ್ ತಾಮಿಮಿ ತಿಳಿಸಿದ್ದಾರೆ.

ತನ್ನ ಪತಿ ಬಾಸ್ಸೆಮ್ ಅಲ್ ತಾಮಿಮಿ ಅವರನ್ನು ಕೂಡಾ ಇಸ್ರೇಲ್ ಸೇನೆ ಅ.20ರಂದು ಬಂಧಿಸಿದ್ದು, ಆವಾಗಿನಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು ಸಾರಿಮಾನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News