ಪಾಕ್ ಚುನಾವಣೆ: ಇಮ್ರಾನ್ ಖಾನ್ ಪಕ್ಷ ಬೆಂಬಲಿತ ಪಕ್ಷೇತರರ ಮುನ್ನಡೆ

Update: 2024-02-09 04:43 GMT

ಇಮ್ರಾನ್ ಖಾನ್ (Photo: PTI)

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಬೆಂಬಲಿಸಿದ ಪಕ್ಷೇತರರು ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಸ್ಥಳೀಯ ಟಿವಿ ಚಾನೆಲ್ ಗಳು ವರದಿ ಮಾಡಿವೆ.

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿತ್ತು. ಆದರೆ ಸ್ಥಳೀಯ ಟಿವಿ ಚಾನೆಲ್ ಗಳ ವರದಿಗಳ ಪ್ರಕಾರ, ಪಕ್ಷ ಬೆಂಬಲಿಸಿದ್ದ ಅಥವಾ ಪಕ್ಷದ ಮೂಲದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಮತದಾನ ಮುಗಿದ 11 ಗಂಟೆಗಳ ಬಳಿಕ ಮೊದಲ ಫಲಿತಾಂಶ ಪ್ರಕಟವಾಗಿದ್ದು, ಇದು ಪಿಟಿಐ ಪರವಾಗಿದೆ.

ಟಿವಿ ಚಾನೆಲ್ ಗಳು ಸ್ಥಳೀಯ ಕ್ಷೇತ್ರ ಮಟ್ಟದಲ್ಲಿ ಮುನ್ನಡೆಯ ಆಧಾರದಲ್ಲಿ ಸಮೀಕ್ಷೆಗಳನ್ನು ನಡೆಸುತ್ತಿವೆ. ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಝ್ (ಪಿಎಂಎಲ್-ಎನ್) ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ಪಾಕಿಸ್ತಾನ ಸೇನೆ 74 ವರ್ಷದ ನವಾಝ್ ಷರೀಫ್ ಅವರ ಪರವಾಗಿದೆ ಎನ್ನಲಾಗುತ್ತಿದೆ. ಆದರೆ ಸ್ಥಳೀಯ ಟಿವಿ ಚಾನೆಲ್ ಗಳ ಪ್ರಕಾರ, ಪಕ್ಷ ಕಳಪೆ ಪ್ರದರ್ಶನ ತೋರುತ್ತಿದ್ದು, ಒಂದು ಕ್ಷೇತ್ರದಲ್ಲಿ ಸ್ವತಃ ಷರೀಫ್ ಹಿನ್ನಡೆಯಲ್ಲಿದ್ದಾರೆ.

336 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 266 ಅಭ್ಯರ್ಥಿಗಳನ್ನು ನೇರ ಮತದಾನದ ಮೂಲಕ ಚುನಾಯಿಸಲಾಗುತ್ತಿದೆ. ಉಳಿದ 70 ಸ್ಥಾನಗಳು ಮೀಸಲಾಗಿರುತ್ತವೆ. ಈ ಪೈಕಿ 60 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದರೆ, 10 ಸ್ಥಾನಗಳನ್ನು ಮುಸ್ಲಿಮೇತರ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿದೆ. ವಿಧಾನಸಭೆಗಳಲ್ಲಿ ಇರುವ ಆಯಾ ಪಕ್ಷದ ಪ್ರಾತಿನಿಧ್ಯದ ಆಧಾರದಲ್ಲಿ ಇದನ್ನು ಹಂಚಿಕೆ ಮಾಡಲಾಗುತ್ತದೆ. ಬಹುಮತಕ್ಕೆ 133 ಸ್ಥಾನಗಳ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News