ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿಕೆ ; ನಾಳೆ ಪಿಪಿಪಿ-ಪಿಎಂಎಲ್-ಎನ್ ನಡುವೆ ಮತ್ತೆ ಸಭೆ
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಿ 9 ದಿನ ಕಳೆದರೂ ಇನ್ನೂ ಸರಕಾರ ರಚನೆಯಾಗದಿರುವುದರಿಂದ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಮೈತ್ರಿ ಸರಕಾರ ರಚಿಸುವುದಾಗಿ ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಹಾಗೂ ಬಿಲಾವಲ್ ಭುಟ್ಟೋ ಅವರ ಪಿಪಿಪಿ ಪಕ್ಷಗಳು ಘೋಷಿಸಿದ್ದರೂ ಆಯಕಟ್ಟಿನ ಹುದ್ದೆಗಳಿಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ಸರಕಾರ ರಚನೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಎರಡೂ ಪಕ್ಷಗಳ ನಡುವೆ ಸೋಮವಾರ(ಫೆಬ್ರವರಿ 18) ನಾಲ್ಕನೇ ಸಭೆ ನಡೆಯಲಿದ್ದು ಸರಕಾರ ರಚಿಸುವ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ಉಭಯ ಪಕ್ಷಗಳ ಮುಖಂಡರು ಹೇಳಿದ್ದಾರೆ. ಮೈತ್ರಿ ಸರಕಾರ ರಚನೆಯ ನಿಟ್ಟಿನಲ್ಲಿ ಎರಡೂ ಪಕ್ಷಗಳು `ಸಂಪರ್ಕ ಮತ್ತು ಸಮನ್ವಯ ಸಮಿತಿ(ಸಿಸಿಸಿ)ಯನ್ನು ರಚಿಸಿವೆ. ಎರಡೂ ಪಕ್ಷಗಳ ಸಿಸಿಸಿ ಹಲವು ಬಾರಿ ಸಭೆ ನಡೆಸಿದ್ದರೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. `ಉಭಯ ಪಕ್ಷಗಳು ಮುಂದಿರಿಸಿದ ಪ್ರಸ್ತಾವನೆಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದು ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಪಾಕಿಸ್ತಾನದ ಸ್ಥಿರತೆಗಾಗಿ ಸದೃಢ ಪ್ರಜಾಸತ್ತಾತ್ಮಕ ಸರಕಾರದ ಅಗತ್ಯವಿರುವುದರಿಂದ ಸಮಿತಿ ಸದಸ್ಯರು ಒಮ್ಮತದ ಅಭಿಪ್ರಾಯ ಸಾಧಿಸುವ ಅಗತ್ಯದ ಬಗ್ಗೆ ಚರ್ಚಿಸಿದರು. ಆದರೆ ವಿಷಯವನ್ನು ಅಂತಿಮಗೊಳಿಸುವ ಮುನ್ನ ಇನ್ನಷ್ಟು ಚರ್ಚೆಯ ಅಗತ್ಯವಿದೆ' ಎಂದು ಎರಡೂ ಪಕ್ಷಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರದಲ್ಲಿ ಸರಕಾರ ರಚನೆಗೆ ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಕಳೆದ ಮಂಗಳವಾರ ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ ಹೇಳಿತ್ತು. ಅದರಂತೆ, ಶಹಬಾಝ್ ಷರೀಫ್‍ರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರುವುದಾಗಿ ಪಿಎಂಎಲ್-ಎನ್ ಘೋಷಿಸಿತ್ತು.
ಆದರೆ ಮರುದಿನ ಕೆಲವೊಂದು ಷರತ್ತು ಮುಂದಿರಿಸಿದ್ದ ಭುಟ್ಟೋ, ತಮ್ಮ ಪಕ್ಷ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆ. ಅಧ್ಯಕ್ಷ ಹುದ್ದೆ ಸೇರಿದಂತೆ ಕೆಲವು ಮಹತ್ವದ ಹುದ್ದೆಗಳನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂದು ಪಟ್ಟುಹಿಡಿದ ಬಳಿಕ ಸರಕಾರ ರಚನೆ ಪ್ರಕ್ರಿಯೆಗೆ ತೊಡಕಾಗಿದೆ.
ಈ ಮಧ್ಯೆ, ಚುನಾವಣೆಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿರುವ ಪಿಟಿಐ ಪಕ್ಷದ ಕಾರ್ಯಕರ್ತರು ದೇಶದಾದ್ಯಂತ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.