ಇಟಲಿಯಲ್ಲಿ ಟಿವಿ ವಾಹಿನಿಯ ವಿರುದ್ಧ ಪ್ರತಿಭಟನೆ; 10 ಮಂದಿಗೆ ಗಾಯ

Update: 2024-02-14 16:33 GMT

Photo : Indiatoday

ರೋಮ್: ಗಾಝಾ ಸಂಘರ್ಷಕ್ಕೆ ಸಂಬಂಧಿಸಿದ ವರದಿಯನ್ನು ಪ್ರಸಾರ ಮಾಡುವಾಗ ಫೆಲೆಸ್ತೀನೀಯರ ಸಂಕಷ್ಟವನ್ನು ಮರೆಮಾಚಿ ಇಸ್ರೇಲ್ ಪರವಾದ ವರದಿಯನ್ನು ಪ್ರಸಾರ ಮಾಡುತ್ತಿರುವ ಆರೋಪದಲ್ಲಿ ಇಟಲಿಯ ಸರಕಾರಿ ಸ್ವಾಮ್ಯದ ಆರ್‍ಎಐ ಟಿವಿ ವಾಹಿನಿಯ ವಿರುದ್ಧ ನೇಪಲ್ಸ್ ನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಆರ್‍ಎಐ ಕಚೇರಿಯಿದ್ದ ಕಟ್ಟಡದೊಳಗೆ ಪ್ರತಿಭಟನಾಕಾರರು ನುಗ್ಗಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಐವರು ಪೊಲೀಸರು ಹಾಗೂ ಐದು ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವಾರ ಆರ್‍ಎಐ ಟಿವಿ ವಾಹಿನಿಯಲ್ಲಿ ಪ್ರಸಾರವಾದ ರ‍್ಯಾಪ್ ಸಂಗೀತ ಕಾರ್ಯಕ್ರಮದ ಅಂತ್ಯದಲ್ಲಿ ಗಾಯಕ ಘಾಲಿ `ನರಮೇಧ ನಿಲ್ಲಿಸಿ' ಎಂದು ಕರೆನೀಡಿದ್ದರು. ಈ ಸಂದರ್ಭ ಅವರು ಗಾಝಾ ಅಥವಾ ಇಸ್ರೇಲ್‍ನ ಹೆಸರನ್ನು ಉಲ್ಲೇಖಿಸಿರಲಿಲ್ಲ. ಈ ಹೇಳಿಕೆಯನ್ನು ಖಂಡಿಸಿದ್ದ ರೋಮ್‍ನಲ್ಲಿನ ಇಸ್ರೇಲ್ ರಾಯಭಾರಿ `ಸಂಗೀತ ಕಾರ್ಯಕ್ರಮದ ಮೂಲಕ ದ್ವೇಷ ಮತ್ತು ಪ್ರಚೋದನೆಗೆ ಪ್ರೋತ್ಸಾಹಿಸುವ ಕಾರ್ಯ ನಡೆದಿದೆ' ಎಂದು ಟೀಕಿಸಿದ್ದರು. ಬಳಿಕ ಆರ್‍ಎಐ ಟಿವಿ ವಾಹಿನಿಯ ಮುಖ್ಯ ಕಾಯನಿರ್ವಹಣಾಧಿಕಾರಿ ರಾಬರ್ಟೋ ಸೆರ್ಗಿಯೋ `ಘಾಲಿ ನೀಡಿದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಆರ್‍ಎಐ ಇಸ್ರೇಲ್ ಮತ್ತು ಯೆಹೂದಿ ಜನತೆಯನ್ನು ಬೆಂಬಲಿಸುತ್ತದೆ' ಎಂದು ಹೇಳಿದ್ದರು.

ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಫೆಲಸ್ತೀನ್ ಪರ ಘೋಷಣೆ ಕೂಗಿ, ಆರ್‍ಎಐ ವಾಹಿನಿಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News