ಟೆಹರಾನ್‌ನಲ್ಲಿ ರಯಿಸೀಗೆ ಅಂತಿಮ ವಿದಾಯ | ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಲಕ್ಷಾಂತರ ಜನ
ಟೆಹರಾನ್ : ರವಿವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹೀಂ ರಯಿಸೀ ಹಾಗೂ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದುಲಹಿಯಾನ್ ಹಾಗೂ ಇತರ ಆರು ಮಂದಿಯ ಅಂತ್ಯಕ್ರಿಯೆಯ ಪ್ರಯುಕ್ತ ಆಯೋಜಿಸಲಾದ ಪ್ರಾರ್ಥನಾ ಸಭೆಯ ನೇತೃತ್ವವನ್ನು ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ವಹಿಸಿದ್ದರು.
ಟೆಹರಾನ್ ವಿಶ್ವವಿದ್ಯಾನಿಲಯದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮೃತರನ್ನು ಇರಿಸಲಾಗಿದ್ದ ಶವಪೆಟ್ಟಿಗೆಗಳ ಮೇಲೆ ಇರಾನ್‌ನ ರಾಷ್ಟ್ರಧ್ವಜಗಳನ್ನು ಹೊದಿಸಲಾಗಿತ್ತು.
ಇರಾನ್ ಅಧ್ಯಕ್ಷರ ಅಂತಿಮ ಯಾತ್ರೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸುವುದು ಹಾಗೂ ಆನ್‌ಲೈನ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಪ್ರಕಟಿಸುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸಾಮೂಹಿಕ ಪ್ರಾರ್ಥನೆಯ ಸಂದರ್ಭ ಇರಾನ್‌ನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಮುಖ್‌ಬೀರ, ಅಯಾತೊಲಾ ಖಾಮಿನೈ ಅವರ ಬಳಿ ಶೋಕತಪ್ತರಾಗಿ ನಿಂತಿರುವುದು ಕಂಡುಬಂದಿತು.
ಆನಂತರ ಮೃತದೇಹಗಳನ್ನು ಇರಿಸಲಾದ ಶವಪೆಟ್ಟಿಗೆಗಳನ್ನು ಮೆರವಣಿಗೆಯ ಮೂಲಕ ರಯಿಸೀ ಅವರು ಈ ಮೊದಲು ಭಾಷಣಗಳನ್ನು ಮಾಡಿದ್ದ ಅಝಾದಿ ಚೌಕಕ್ಕೆ ತರಲಾಯಿತು. ಇರಾನ್‌ನ ಅರೆಸೈನಿಕ ಪಡೆಯಾದ ರೆವೆಲ್ಯೂಶನರಿ ಗಾರ್ಡ್‌ನ ಉನ್ನತ ನಾಯಕರು ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಕೂಡಾ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡರು. ಫೆಲೆಸ್ತೀನ್ ಜನತೆಯ ಪರವಾಗಿ, ಗಾಝಾದಲ್ಲಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಗುಂಪುಗಳ ಪರವಾಗಿ, ನಮ್ಮ ಸಂತಾಪಗಳನ್ನು ವ್ಯಕ್ತಪಡಿಸಲು ತಾನು ಬಂದಿರುವುದಾಗಿ ಹನಿಯೆಹ್ ತಿಳಿಸಿದರು. ಪವಿತ್ರ ರಮಝಾನ್ ತಿಂಗಳಲ್ಲಿ ತಾನು ರಯಿಸೀ ಅವರನ್ನು ಟೆಹರಾನ್‌ನಲ್ಲಿ ಭೇಟಿ ಮಾಡಿರುವುದನ್ನು ಅವರು ನೆನಪಿಸಿಕೊಂಡರು.
ಟೆಹರಾನ್‌ನಲ್ಲಿ ಬುಧವಾರದ ಅಂತಿಮಯಾತ್ರೆಯ ಬಳಿಕ ರಯಿಸೀ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಖೊರಸಾನ್ ಪ್ರಾಂತ್ಯಕ್ಕೆ ಕೊಂಡೊಯ್ಯಲಾಗುವುದು. ಆನಂತರ ಅವರ ಹುಟ್ಟೂರಾದ ಈಶಾನ್ಯ ಇರಾನ್ ಮಶಾದ್ ನಗರದಲ್ಲಿ ಅದನ್ನು ಸಾಗಿಸಲಾಗುವುದು.
ಆನಂತರ ಗುರುವಾರದಂದು ಇಮಾಮ್ ರೆಝಾ ಮಂದಿರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.