ಅಝರ್‌ಬೈಝಾನ್ ವಿಮಾನ ಪತನಕ್ಕೆ ರಶ್ಯ ಹೊಣೆಯಾಗಿರುವ ಸಾಧ್ಯತೆ : ಅಮೆರಿಕ ಸುಳಿವು
ವಾಶಿಂಗ್ಟನ್: ಅಝರ್‌ಬೈಜಾನ್ ವಿಮಾನದ ಪತನಕ್ಕೆ ರಶ್ಯವು ಹೊಣೆಯಾಗಿರುವ ಸಾಧ್ಯತೆಯಿದೆಯೆಂದು ಅಮೆರಿಕ ಶುಕ್ರವಾರ ತಿಳಿಸಿದೆ. 67 ಮಂದಿ ಪ್ರಯಾಣಿಸುತ್ತಿದ್ದ ಅಝರ್‌ಬೈಝಾನ್‌ನ ವಿಮಾನವೊಂದು ಕ್ರಿಸ್‌ಮಸ್ ದಿನದಂದು ಕಝಕಿಸ್ತಾನದಲ್ಲಿ ಪತನಗೊಂಡಿತ್ತು.
ಈ ವಿಮಾನವು ಅಝುರ್‌ಬೈಜಾನ್ ರಾಜಧಾನಿ ಬಾಕುವಿನಿಂದ ರಶ್ಯದ ಚೆಚೆನ್ಯ ಪ್ರಾಂತದ ರಾಜಧಾನಿ ಗ್ರೊಝ್ನಿಗೆ ಪ್ರಯಾಣಿಸುತ್ತಿದ್ದಾಗ ಅದು ಪತನಗೊಂಡಿತ್ತು.
‘‘ ಡಿಸೆಂಬರ್ 25ರಂದು ಸಂಭವಿಸಿದ ಅಝರ್‌ಬೈಝಾನ್ ಏರ್‌ಲೈನ್ಸ್‌ನ ವಿಮಾನ ದುರಂತಕ್ಕ್ಕೆ ರಶ್ಯವು ಕಾರಣವಾಗಿರುವ ಸಾಧ್ಯತೆಯಿದೆಯೆಂದು ಪ್ರಾಥಮಿಕ ಸುಳಿವುಗಳು ದೊರೆತಿವೆ" ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿಸ್ತೃತ ವಿವರಣೆ ನೀಡದ ಅವರು, ವಿಮಾನ ದುರಂತದ ಕುರಿತ ತನಿಖೆಗೆ ನೆರವಾಗಲು ಅಮೆರಿಕವು ಸಿದ್ಧವಿರುವುದಾಗಿ ಹೇಳಿದರು.
ಅಝರ್‌ಬೈಝಾನ್ ವಿಮಾನ ಪತನದ ಬಗ್ಗೆ ಪ್ರತಿಕ್ರಿಯಿಸಲು ರಶ್ಯವು ನಿರಾಕರಿಸಿದೆ. ಆದರೆ ಉಕ್ರೇನ್ ನಿರಂತರವಾಗಿ ಡ್ರೋನ್ ದಾಳಿಗಳನ್ನು ನಡೆಸುತ್ತಿರುವುದರಿದ ರಶ್ಯನ್ ಪ್ರಾಂತವಾದ ಚೆಚೆನ್ಯದಲ್ಲಿ ಪರಿಸ್ಥಿತಿಯು ಅತ್ಯಂತ ಜಟಿಲವಾಗಿದೆಯೆಂದು ಅದು ಹೇಳಿದೆ.
ರಶ್ಯದ ವಾಯುರಕ್ಷಣಾ ವ್ಯವಸ್ಥೆಗಳು ಅಝರ್‌ಬೈಜಾನ್ ಏರ್‌ಲೈನ್‌ನ ವಿಮಾನವನ್ನು ಉಕ್ರೇನ್‌ನ ದೀರ್ಘ ವ್ಯಾಪ್ತಿಯ ಡ್ರೋನ್‌ಗಳೆಂದು ಶಂಕಿಸಿ ದಾಳಿ ನಡೆಸಿರುವ ಸಾಧ್ಯತೆಯಿದೆಯೆಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದ ಒಂದು ಭಾಗದಲ್ಲಿ ಸ್ಪೋಟದಿಂದ ರಂಧ್ರಗಳಾಗಿರುವುದು ಕಂಡುಬಂದಿದೆಯೆಂದು ಅವರು ಹೇಳಿದ್ದಾರೆ.