ಖಾರ್ಕಿವ್ ಮೇಲೆ ರಶ್ಯದ ಬಾಂಬ್ ದಾಳಿ

Update: 2024-05-26 17:13 GMT

ಸಾಂದರ್ಭಿಕ ಚಿತ್ರ

ಕೀವ್, ಮೇ 26: ಪೂರ್ವ ಉಕ್ರೇನ್‍ನ ಖಾರ್ಕಿವ್ ನಗರದಲ್ಲಿನ ಸೂಪರ್‍ಮಾರ್ಕೆಟ್ ಮೇಲೆ ರಶ್ಯ ನಡೆಸಿದ ಬಾಂಬ್‍ದಾಳಿಯಲ್ಲಿ ಕನಿಷ್ಠ11 ಮಂದಿ ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ನಗರದ ಮೇಲೆ ಶನಿವಾರವಿಡೀ ರಶ್ಯದ ಕ್ಷಿಪಣಿ ದಾಳಿ ನಡೆದಿದೆ ಎಂದು ಖಾರ್ಕಿವ್ ಪ್ರಾಂತದ ಗವರ್ನರ್ ಒಲೆಗ್ ಸಿನೆಗುಬೋವ್ ರವಿವಾರ ಹೇಳಿದ್ದಾರೆ.

ರಶ್ಯದ ಎರಡು ಗೈಡೆಡ್ ಬಾಂಬ್ (ಯುದ್ಧವಿಮಾನದಿಂದ ಪ್ರಯೋಗಿಸಿದ ಬಳಿಕ ರಿಮೋಟ್‍ನಿಂದ ನಿಯಂತ್ರಿಸಲ್ಪಡುವ ಬಾಂಬ್)ಗಳು ಸೂಪರ್ ಮಾರ್ಕೆಟ್‍ಗೆ ಅಪ್ಪಳಿಸಿದ್ದರಿಂದ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿದ್ದು ಇತರ 40 ಮಂದಿ ಗಾಯಗೊಂಡಿದ್ದಾರೆ. 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

`ನಾಗರಿಕರನ್ನು ಗುರಿಯಾಗಿಸಿ ನಡೆಸಿರುವ ಹೇಯ ದಾಳಿ ಇದಾಗಿದೆ. ಪುಟಿನ್‍ರಂತಹ ಹುಚ್ಚರು ಮಾತ್ರ ಜನರನ್ನು ಇಂತಹ ಕ್ರೂರ ರೀತಿಯಲ್ಲಿ ಭಯಪಡಿಸಲು ಮತ್ತು ಕೊಲ್ಲಲು ಸಾಧ್ಯ' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಖಂಡಿಸಿದ್ದಾರೆ. `ಸೂಪರ್ ಮಾರ್ಕೆಟ್‍ನ ಒಳಗಡೆ ಕಾರ್ಯಾಚರಿಸುತ್ತಿದ್ದ ಮಿಲಿಟರಿ ಅಂಗಡಿಯನ್ನು ಮತ್ತು ಕಮಾಂಡ್ ನೆಲೆಯನ್ನು ಗುರಿಯಾಗಿಸಿ ನಡೆಸಿದ ದಾಳಿ ಯಶಸ್ವಿಯಾಗಿದೆ' ಎಂದು ರಶ್ಯದ ಸೇನಾಧಿಕಾರಿಯನ್ನು ಉಲ್ಲೇಖಿಸಿ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಶನಿವಾರ ಖಾರ್ಕಿವ್‍ನ ಪೋಸ್ಟ್ ಆಫೀಸ್ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 14 ಮಂದಿ ಗಾಯಗೊಂಡಿರುವುದಾಗಿ ನಗರದ ಮೇಯರ್ ಹೇಳಿದ್ದಾರೆ.

`ರಶ್ಯ ನಡೆಸುತ್ತಿರುವ ಭಯೋತ್ಪಾದಕ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್‍ಗೆ ಸಾಕಷ್ಟು ವಾಯುರಕ್ಷಣಾ ವ್ಯವಸ್ಥೆ'ಗಳನ್ನು ತುರ್ತಾಗಿ ಒದಗಿಸುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಪಾಶ್ಚಾತ್ಯ ಮುಖಂಡರನ್ನು ಆಗ್ರಹಿಸಿದ್ದಾರೆ. ಈ ಮಧ್ಯೆ, ಬೆಲೊಗೊರೊಡ್ ಪ್ರಾಂತದ ಸಣ್ಣ ಹಳ್ಳಿಯ ಮೇಲೆ ಉಕ್ರೇನ್ ನಡೆಸಿದ ಫಿರಂಗಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಇತರ 10 ಮಂದಿ ಗಾಯಗೊಂಡಿರುವುದಾಗಿ ರಶ್ಯದ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News