ಚೀನಾದಲ್ಲಿ ಭೀಕರ ಪ್ರವಾಹ: ಕನಿಷ್ಟ 20 ಮಂದಿ ಮೃತ್ಯು

Update: 2023-08-02 18:05 GMT

ಬೀಜಿಂಗ್: ಚೀನಾ ರಾಜಧಾನಿ ಬೀಜಿಂಗ್ ಸುತ್ತಮುತ್ತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ರಸ್ತೆಗಳು ಕೊಚ್ಚಿಹೋಗಿವೆ. ಮಳೆ ಮತ್ತು ಪ್ರವಾಹದಿಂದಾಗಿ ಕನಿಷ್ಟ 20 ಮಂದಿ ಮೃತಪಟ್ಟಿದ್ದು 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.

ಹಲವು ಮರಗಳು ಉರುಳಿಬಿದ್ದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಬೀಜಿಂಗ್ ಹೊರವಲಯ ಹಾಗೂ ತಿಯಾನ್‌ಜಿನ್ ಮತ್ತು ರೊರೊವ್ ನಗರಗಳಲ್ಲಿನ ಶಾಲೆಗಳು ಸರಕಾರಿ ಕಟ್ಟಡಗಳಲ್ಲಿ ತಾತ್ಕಾಲಿಕ ಶಿಬಿರಗಳನ್ನು ತೆರೆಯಲಾಗಿದೆ. ಮೆಂಟೊಗು ಜಿಲ್ಲೆಯ ಹಲವೆಡೆ ರಸ್ತೆಯಲ್ಲಿ ಹರಿಯುತ್ತಿರುವ ನೆರೆನೀರಿನಲ್ಲಿ ಹಲವು ವಾಹನಗಳು ಕೊಚ್ಚಿಹೋಗಿವೆ. ಪ್ರಮುಖ ರಸ್ತೆಗಳಲ್ಲಿ ತುಂಬಿರುವ ಕೆಸರು ಮತ್ತು ಕಸಕಡ್ಡಿಗಳನ್ನು ಕ್ರೇನ್ ಬಳಸಿ ತೆರವುಗೊಳಿಸಲಾಗುತ್ತಿದೆ.

ಹಲವೆಡೆ ಭೂಕುಸಿತ ಸಂಭವಿಸಿದ್ದು ರಾಜಧಾನಿ ಬೀಜಿಂಗ್‌ನಲ್ಲಿ 11 ಮಂದಿ, ಹೆಬೆಯ್ ಪ್ರಾಂತದಲ್ಲಿ 9 ಮಂದಿ ಸೇರಿದಂತೆ ಒಟ್ಟು 20 ಮಂದಿ ಮೃತಪಟ್ಟಿದ್ದು ಇತರ 27 ಮಂದಿ ನಾಪತ್ತೆಯಾಗಿದ್ದಾರೆ. ಫಂಗ್‌ಶಾನ್ ಜಿಲ್ಲೆಯಲ್ಲಿ ಸುಮಾರು 60,000 ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಬೀಜಿಂಗ್‌ನ ನೈಋತ್ಯದಲ್ಲಿರುವ ರೊರೊವ್ ನಗರದಲ್ಲಿ ಸುಮಾರು 1,25,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಫೋನಿಕ್ಸ್ ಟಿವಿ ವರದಿ ಮಾಡಿದೆ.

ಯಾಂಗ್‌ಡಿಂಗ್ ನದಿ ಉಕ್ಕೇರಿ ಹರಿಯುತ್ತಿರುವುದರಿಂದ ರಾಜಧಾನಿ ಬೀಜಿಂಗ್‌ನ ಪೂರ್ವದಲ್ಲಿರುವ ಬಂದರು ನಗರ ತಿಯಾಂಜಿನ್‌ನಲ್ಲಿ 35,000 ಜನರನ್ನು, ಶಾಂಕ್ಸಿ ಪ್ರಾಂತದಿಂದ ಸುಮಾರು 42,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಹಲವು ಪ್ರದೇಶಗಳಲ್ಲಿ ಶನಿವಾರದಿಂದ ಸುಮಾರು 500 ಮಿ.ಮೀನಷ್ಟು ಮಳೆ ಸುರಿಯುತ್ತಿದೆ. ಬೀಜಿಂಗ್, ತಿಯಾಂಜಿನ್ ಮತ್ತು ಶಿಜಾಝ್ವಂಗ್ ಸೇರಿದಂತೆ ಹೈಹೆ ಜಲಾನಯನ ಪ್ರದೇಶದಲ್ಲಿ ಸುಮಾರು 13 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಪ್ರವಾಹದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲು , ಜೀವಹಾನಿ, ಆಸ್ತಿಹಾನಿಯನ್ನು ಕಡಿಮೆ ಮಾಡಲು ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷ ಕ್ಸಿಜಿಂಪಿಂಗ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News