ಅಫ್ಘನ್ನರ ಬಲವಂತದ ಗಡೀಪಾರಿನಿಂದ ಮಾನವಹಕ್ಕುಗಳ ತೀವ್ರ ಉಲ್ಲಂಘನೆ

Update: 2023-10-07 17:51 GMT

                                                                     ಸಾಂದರ್ಭಿಕ ಚಿತ್ರ | Photo: NDTV 

ಜಿನೆವಾ : ಪಾಕಿಸ್ತಾನದಿಂದ ಅಫ್ಘನ್ನರನ್ನು ಬಲವಂತದಿಂದ ಗಡೀಪಾರು ಮಾಡುವುದು ಕುಟುಂಬಗಳನ್ನು ಪ್ರತ್ಯೇಕಿಸುವ ಜತೆಗೆ ತೀವ್ರ ಮಾನವಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಶನಿವಾರ ಎಚ್ಚರಿಕೆ ನೀಡಿದೆ.

1.7 ದಶಲಕ್ಷ ಅಫ್ಘನ್ನರು ಸೇರಿದಂತೆ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನವು ಇತ್ತೀಚೆಗೆ ಘೋಷಿಸಿತ್ತು ಮತ್ತು ಸಾಮೂಹಿಕ ಬಂಧನ ಹಾಗೂ ಉಚ್ಛಾಟನೆಯನ್ನು ತಪ್ಪಿಸಲು ಅ. 31ರ ಒಳಗೆ ತಮ್ಮ ಸ್ವದೇಶಕ್ಕೆ ಮರಳುವಂತೆ ವಲಸಿಗರಿಗೆ ಸೂಚಿಸಿತ್ತು. ಇದು ಅಫ್ಘನ್ನರನ್ನು ಗುರಿಯಾಗಿಸಿದ ಕಾರ್ಯಾಚರಣೆಯಲ್ಲ, ದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವರನ್ನು ಉದ್ದೇಶಿಸಿದ ಕ್ರಮವಾಗಿದೆ. ಕಾನೂನು ಬಾಹಿರವಾಗಿ ನೆಲೆಸಿರುವ ವಲಸಿಗರ ಬಗ್ಗೆ ಸುಳಿವು ನೀಡುವ ಜನರಿಗೆ ಪುರಸ್ಕಾರ ನೀಡಲಾಗುವುದು ಎಂದು ಪಾಕ್ ಸರಕಾರ ಘೋಷಿಸಿದೆ.

ಅಫ್ಘಾನಿಸ್ತಾನ ತೀವ್ರ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಹಲವು ನಿರ್ಬಂಧ ವಿಧಿಸಲಾಗಿದೆ. ನೆರೆದೇಶಗಳಿಗೆ ಪರಾರಿಯಾಗುವ ಅನಿವಾರ್ಯತೆಗೆ ಸಿಲುಕಿರುವ ಈ ವಲಸಿಗರನ್ನು ಸ್ವದೇಶಕ್ಕೆ ಗಡೀಪಾರು ಮಾಡಿದರೆ ಅಪಾಯಕ್ಕೆ ದೂಡಿದಂತಾಗುತ್ತದೆ ಎಂದು ವಲಸಿಗರಿಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಂಘಟನೆ ಮತ್ತು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ.

ದೇಶೀಯ ನೀತಿಯ ಮೇಲೆ ಪಾಕಿಸ್ತಾನದ ಸಾರ್ವಭೌಮ ಅಧಿಕಾರವನ್ನು ಒಪ್ಪಿಕೊಳ್ಳುತ್ತೇವೆ. ಅಂತರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವವರು ಸೇರಿದಂತೆ ಅಫ್ಘಾನ್ ಪ್ರಜೆಗಳ ನೋಂದಾವಣೆ ಮತ್ತು ನಿರ್ವಹಣೆಯಲ್ಲಿ ನೆರವಾಗಲು ಸಿದ್ಧ ಎಂದು ವಿಶ್ವಸಂಸ್ಥೆ ಹೇಳಿದೆ. ಅಫ್ಘಾನ್ ಪ್ರಜೆಗಳ ಬಲವಂತದ ವಾಪಸಾತಿ ನಿರ್ಧಾರವನ್ನು ಅಮಾನತುಗೊಳಿಸುವಂತೆ ಮತ್ತು ಯಾವುದೇ ಸಂಭಾವ್ಯ ವಾಪಸಾತಿ ಪ್ರಕ್ರಿಯೆ ಸುರಕ್ಷಿತ, ಘನತೆ ಮತ್ತು ಸ್ವಯಂಪ್ರೇರಿತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ದೇಶಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.

ಈ ಮಧ್ಯೆ, ಮನೆಯಲ್ಲಿ ಬಾಡಿಗೆಗೆ ಇರುವ ಅಕ್ರಮ ಅಫ್ಘನ್ನರು ಹಾಗೂ ಅವರ ಕುಟುಂಬದವರನ್ನು ಈ ತಿಂಗಳಾಂತ್ಯದೊಳಗೆ ತೆರವುಗೊಳಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಸರಕಾರ ಮನೆ ಮಾಲಕರಿಗೆ ಎಚ್ಚರಿಕೆ ನೀಡಿದೆ. ಈ ಮಧ್ಯೆ, ಸರಕಾರ ಘೋಷಿಸಿದ ಬಳಿಕ ನೂರಾರು ಅಫ್ಘನ್ ಕುಟುಂಬ ಸ್ವಯಂಪ್ರೇರಣೆಯಿಂದ ದೇಶದಿಂದ ಹೊರತೆರಳಿದೆ ಎಂದು ನೈಋತ್ಯ ಪಾಕಿಸ್ತಾನದ ಮಾಹಿತಿ ಸಚಿವ ಜಾನ್ ಅಚಕ್‍ಝಾಯಿ ಹೇಳಿದ್ದಾರೆ.

ಮಾನವ ಹಕ್ಕುಗಳ ಗುಂಪುಗಳು ಮತ್ತು ಅಫ್ಘಾನ್ ಆಡಳಿತ ಪಾಕಿಸ್ತಾನದ ಕ್ರಮವನ್ನು ಟೀಕಿಸಿದೆ. 1979-89ರಲ್ಲಿ ಸೋವಿಯತ್ ಯೂನಿಯನ್‍ನ ಆಕ್ರಮಣದ ಬಳಿಕ ಅಫ್ಘಾನಿಸ್ತಾನದಿಂದ ಲಕ್ಷಾಂತರ ನಿರಾಶ್ರಿತರು ಪಾಕ್‍ಗೆ ಓಡಿಬಂದಿದ್ದಾರೆ. 2021ರ ಆಗಸ್ಟ್‍ನಲ್ಲಿ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಪಡೆದ ಬಳಿಕ ಸುಮಾರು 1 ಲಕ್ಷ ಜನತೆ ಅಫ್ಘಾನಿಸ್ತಾನದಿಂದ ಪರಾರಿಯಾಗಿದ್ದಾರೆ. ಪಾಕಿಸ್ತಾನದ ಭದ್ರತಾ ಪಡೆ ಹಾಗೂ ಪೊಲೀಸರು ಗಡಿಭಾಗದಿಂದ ಒಳನುಸುಳುವ ಅಫ್ಘನ್ ನಿರಾಶ್ರಿತರನ್ನು ನಿಯಮಿತವಾಗಿ ಬಂಧಿಸಿ ಗಡೀಪಾರು ಮಾಡುತ್ತಿದೆ. ಆದರೆ ಇದೇ ಪ್ರಥಮ ಬಾರಿಗೆ ಪಾಕ್ ಸರಕಾರ ಇಂತಹ ಪ್ರಮುಖ ಕಾರ್ಯಾಚರಣೆಯ ಯೋಜನೆಯನ್ನು ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News