ಝೆಕ್ ಗಣರಾಜ್ಯದ ವಿವಿಯಲ್ಲಿ ಶೂಟೌಟ್; ಕನಿಷ್ಟ 14 ಮಂದಿ ಮೃತ್ಯು; 25 ಮಂದಿಗೆ ಗಾಯ

Update: 2023-12-22 17:03 GMT

ಗುಂಡಿನ ದಾಳಿಗೆ ಹೆದರಿ ವಿದ್ಯಾರ್ಥಿಗಳು ಅವಿತುಕೊಂಡಿರುವುದು  Photo: twitter.com/OG_BENZEMA_

ಪ್ರೇಗ್: ಝೆಕ್ ಗಣರಾಜ್ಯದ ರಾಜಧಾನಿ ಪ್ರೇಗ್‍ನಲ್ಲಿರುವ `ಆಟ್ರ್ಸ್ ಆಫ್ ಚಾಲ್ರ್ಸ್' ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 14 ಮಂದಿ ಮೃತಪಟ್ಟಿದ್ದು ಇತರ 25 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 10 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಹತ್ಯೆ ನಡೆಸಿದ ಬಳಿಕ 24 ವರ್ಷದ ಶಂಕಿತ ಆರೋಪಿ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ ಸಂಜೆ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರ ಮತ್ತು ಶಂಕಿತ ಆರೋಪಿಯ ಗುರುತು ಪತ್ತೆಹಚ್ಚಲಾಗಿದೆ. ಗಾಯಗೊಂಡವರಲ್ಲಿ ಮೂವರು ವಿದೇಶೀಯರು ಎಂದು ಝೆಕ್ ಗಣರಾಜ್ಯದ ಆಂತರಿಕ ಸಚಿವ ವಿಟ್ ರಕುಸಾನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ವಿವಿಯ ಪೊಲೀಸರ ಸಕಾಲಿಕ ಕ್ರಮದಿಂದ ಇನ್ನಷ್ಟು ಸಾವುನೋವು ತಪ್ಪಿದೆ. ಕಟ್ಟಡದೊಳಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ದಾಸ್ತಾನು ಪತ್ತೆಯಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರಾಸೆಕ್ ಹೇಳಿದ್ದಾರೆ.

ಶನಿವಾರ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದ್ದು ಮಧ್ಯಾಹ್ನ ಒಂದು ನಿಮಿಷ ಮೌನ ಆಚರಿಸುವಂತೆ ಸರಕಾರ ಸೂಚಿಸಿದೆ.

ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿ ಸೆಂಟ್ರಲ್ ಬೊಹೆಮಿಯ ಪ್ರಾಂತದ ಹೋಸ್ಟೌನ್ ನಿವಾಸಿಯಾಗಿದ್ದು ಈತ ತನಗೆ ಬದುಕುವ ಇಚ್ಛೆಯಿಲ್ಲ. ಆದ್ದರಿಂದ ಪ್ರೇಗ್ ವಿವಿಗೆ ಹೋಗುತ್ತಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸರಿಗೆ ಮಾಹಿತಿ ದೊರಕಿತ್ತು. ಪೊಲೀಸರು ತಕ್ಷಣ ವಿದ್ಯಾರ್ಥಿಯ ಮನೆಗೆ ಬಂದಾಗ ವಿದ್ಯಾರ್ಥಿಯ ತಂದೆ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿದ್ದರು. ತಕ್ಷಣ ಪೊಲೀಸರು ಪ್ರೇಗ್ ವಿವಿಯ ಕಲಾ ವಿಭಾಗದಲ್ಲಿ ನಡೆಯುತ್ತಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಅಲ್ಲಿ ತಪಾಸಣೆ ನಡೆಸುತ್ತಿದ್ದಾಗ ಪಕ್ಕದ ಕಟ್ಟಡದಲ್ಲಿ ಗುಂಡಿನ ಸದ್ದು ಕೇಳಿಸಿದೆ. ಪೊಲೀಸರು ಅತ್ತ ಧಾವಿಸಿದಾಗ ಮನಸೋ ಇಚ್ಛೆ ಗುಂಡು ಹಾರಿಸಿ 14 ಮಂದಿಯನ್ನು ಹತ್ಯೆಗೈದು ಹಲವರನ್ನು ಗಾಯಗೊಳಿಸಿದ ಬಳಿಕ ಆರೋಪಿ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿಯ ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ಪರಿಶೀಲಿಸಿದಾಗ ಆತ ಈ ಹಿಂದೆ ರಶ್ಯದಲ್ಲಿ ನಡೆದಿದ್ದ ಇದೇ ರೀತಿಯ ಘಟನೆಯಿಂದ ಪ್ರೇರಣೆ ಪಡೆದಿರುವುದು ಸ್ಪಷ್ಟವಾಗಿದೆ. ಪ್ರೇಗ್‍ನ ಹೊರವಲಯದ ಅರಣ್ಯದ ಬಳಿ ಡಿಸೆಂಬರ್ 15ರಂದು ನಡೆದ ವ್ಯಕ್ತಿ ಹಾಗೂ ಆತನ 2 ವರ್ಷದ ಪುತ್ರಿಯ ಹತ್ಯೆಯೂ ಇದೇ ವಿದ್ಯಾರ್ಥಿಯ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಂತರಾಷ್ಟ್ರೀಯ ಸಮುದಾಯದ ಖಂಡನೆ:

ಪ್ರೇಗ್ ವಿವಿಯಲ್ಲಿ ನಡೆದ ಶೂಟೌಟ್‍ನಲ್ಲಿ ಅಮಾಯಕ ವಿದ್ಯಾರ್ಥಿಗಳ ಸಾವು-ನೋವಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ಮತ್ತು ಸಂತಾಪ ವ್ಯಕ್ತವಾಗಿದೆ. ಈ ಭೀಕರ ಕೃತ್ಯಕ್ಕೆ ಯಾವುದೇ ಸಮರ್ಥನೆಯಿಲ್ಲ ಎಂದು ಝೆಕ್ ಪ್ರಧಾನಿ ಪೀಟರ್ ಫಿಯಾಲಾ ಪ್ರತಿಕ್ರಿಯಿಸಿದ್ದಾರೆ.

ಈ ವಿವೇಚನಾಶೂನ್ಯ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಝೆಕ್ ಅಧಿಕಾರಿಗಳಿಗೆ ಅಗತ್ಯದ ಎಲ್ಲಾ ನೆರವನ್ನೂ ಒದಗಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ `ಎಕ್ಸ್' ಮಾಡಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಯುರೋಪಿಯನ್ ಯೂನಿಯನ್ ಅಧ್ಯಕ್ಷೆ ಉರ್ಸುಲಾ ವಾನ್‍ಡರ್ ಲಿಯೆನ್, ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂತಾಪ ಸೂಚಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News