ಸುಡಾನ್ ಸಂಘರ್ಷದಿಂದ ದಕ್ಷಿಣ ಸುಡಾನ್‌ನ ಸಮಸ್ಯೆ ಉಲ್ಬಣ: ವಿಶ್ವಸಂಸ್ಥೆ ವರದಿ

Update: 2023-06-26 17:26 GMT

ನ್ಯೂಯಾರ್ಕ್: ಸುಡಾನ್‌ನಲ್ಲಿ ಕಳೆದ ಎಪ್ರಿಲ್ ಮಧ್ಯಭಾಗದಿಂದ ತೀವ್ರಗೊಂಡಿರುವ ಸಂಷರ್ಘವು ದಕ್ಷಿಣ ಸುಡಾನ್‌ನ ಬವಣೆಯನ್ನು ಹೆಚ್ಚಿಸಿದ್ದು ಮಾನವೀಯ ನೆರವು ಪೂರೈಕೆಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಕಾಯಂ ಪ್ರತಿನಿಧಿ ಅಕುಯೆಯಿ ಬೊನಾ ಮಲ್ವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

12 ವರ್ಷಗಳ ಹಿಂದೆ ಸುಡಾನ್‌ನಿಂದ ಪ್ರತ್ಯೇಕಗೊಂಡಿರುವ ದಕ್ಷಿಣ ಸುಡಾನ್ ಪ್ರತ್ಯೇಕ ದೇಶವಾಗಿ ಗುರುತಿಸಿಕೊಂಡಿದ್ದರೂ ನಿರಂತರ ಸಮಸ್ಯೆಗಳ ಸರಮಾಲೆಯಿಂದ ನಲುಗುತ್ತಿದೆ. ಬಡತನ, ರಾಜಕೀಯ ಅಸ್ಥಿರತೆ, ಆಹಾರದ ಕೊರತೆಯಿಂದಾಗಿ ದೇಶದ ಕೋಟ್ಯಾಂತರ ಜನತೆ ಸುಡಾನ್ ಸೇರಿದಂತೆ ನೆರೆದೇಶಗಳಿಗೆ ಪಲಾಯನ ಮಾಡಿದ್ದಾರೆ.

ದೇಶದಲ್ಲಿ ಉಳಿದಿರುವ ನಿವಾಸಿಗಳಿಗೆ ಅಗತ್ಯವಿರುವ ಮಾನವೀಯ ನೆರವನ್ನು ಒದಗಿಸಲು ಸಮಸ್ಯೆಯಾಗುತ್ತಿದೆ. ಸಮಸ್ಯೆಗೆ ತುಪ್ಪ ಸುರಿಯುವಂತೆ, ಸುಡಾನ್‌ನಿಂದ ದಕ್ಷಿಣ ಸುಡಾನ್‌ಗೆ ಸಾವಿರಾರು ಜನರು ಮರಳಿ ಬರುತ್ತಿದ್ದಾರೆ. ಸುಡಾನ್‌ನಲ್ಲಿ ದಕ್ಷಿಣ ಸುಡಾನ್‌ನ ಸುಮಾರು 2 ದಶಲಕ್ಷ ಜನತೆ ನೆಲೆಸಿದ್ದರು. ಅವರೀಗ ಏಕಾಏಕಿ ದೇಶಕ್ಕೆ ಮರಳಿ ಬರುತ್ತಿರುವುದರಿಂದ ಅವರಿಗೆ ಸ್ಥಳಾವಕಾಶ ಒದಗಿಸಲು, ಆಹಾರದ ವ್ಯವಸ್ಥೆ ಮಾಡಲು ಸಮಸ್ಯೆಯಾಗಿದೆ. ಇದರ ಜತೆಗೆ, ಸುಡಾನ್‌ನ ಜನರೂ ದಕ್ಷಿಣ ಸುಡಾನ್‌ನತ್ತ ಪ್ರವಾಹದ ರೀತಿಯಲ್ಲಿ ಓಡಿ ಬರುತ್ತಿದ್ದಾರೆ. ಅವರಿಗೂ ನೆಲೆ ಒದಗಿಸಬೇಕಾಗಿದ್ದು ಇದು ಸರಕಾರಕ್ಕೆ ದೊಡ್ಡ ಹೊರೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ದಕ್ಷಿಣ ಸುಡಾನ್‌ನ ಕಾಯಂ ಪ್ರತಿನಿಧಿ ಮಲ್ವಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News