ಮೊಸ್ಸಾದ್ ಗಾಗಿ ಗೂಢಚರ್ಯೆ: ಟರ್ಕಿಯಲ್ಲಿ 33 ಮಂದಿಯ ಬಂಧನ

Update: 2024-01-02 17:11 GMT

Photo: @WealthRouteX \ x

ಇಸ್ತಾಂಬುಲ್: ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಗಾಗಿ ಗೂಢಚರ್ಯೆ ನಡೆಸುತ್ತಿದ್ದ ಹಾಗೂ ಅಪಹರಣಗಳ ಸಂಚು ಹೂಡಿದ್ದ 33 ಮಂದಿಯನ್ನು ಬಂಧಿಸಿರುವುದಾಗಿ ಟರ್ಕಿ ಮಂಗಳವಾರ ಪ್ರಕಟಿಸಿದೆ.

ಇಸ್ತಾಂಬುಲ್ ಹಾಗೂ ಆಸುಪಾಸಿನ ಎಂಟು ಪ್ರಾಂತ್ಯಗಳಾದ್ಯಂತ ನಡೆಸಿದ ದಾಳಿಗಳಲ್ಲಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಟರ್ಕಿಯ ಗೃಹ ಸಚಿವ ಅಲಿ ಯೆರ್ಲಿಕಾಯಾ ಅವರು ತಿಳಿಸಿದ್ದಾರೆ.

ಆದರೆ ಬಂಧಿತ ಆರೋಪಿಗಳು ಇಸ್ರೇಲಿ ಪ್ರಜೆಗಳೇ ಅಥವಾ ಮೊಸ್ಸಾದ್ ಗಾಗಿ ಕೆಲಸ ಮಾಡುತ್ತಿರುವ ಸ್ಥಳೀಯರೇ ಎಂಬುದು ತಕ್ಷಣವೇ ತಿಳಿದುಬಂದಿಲ್ಲ.

‘‘ನಮ್ಮ ದೇಶದ ಏಕತೆ ಹಾಗೂ ಸಮಗ್ರತೆಯ ವಿರುದ್ಧ ಬೇಹುಗಾರಿಕಾ ಚಟುವಟಿಕೆಗಳನ್ನು ನಡೆಸುವುದಕ್ಕೆ ನಾವು ಯಾವತ್ತಿಗೂ ಅವಕಾಶ ನೀಡುವುದಿಲ್ಲ ’’ಎಂದು ಯೆರ್ಲಿಕಾಯಾ ಅವರು ಸಾಮಾಜಿಕ ಜಾಲತಾಣದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ದಾಳಿ ಕಾರ್ಯಾಚರಣೆಯ ವೇಳೆ ಟರ್ಕಿಯ ಗುಪ್ತಚರದಳದ ಶಸ್ತ್ರಧಾರಿ ಅಧಿಕಾರಿಗಳು ಮನೆಗಳ ಬಾಗಿಲುಗಳನ್ನು ಒಡೆದು, ಶಂಕಿತ ಆರೋಪಿಗಳನ್ನು ಬಂಧಿಸುವ ವಿಡಿಯೋ ದೃಶ್ಯಾವಳಿಗಳನ್ನು ಯೆರ್ಲಿಕಾಯಾ ಅವರ ಕಾರ್ಯಾಲಯವು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದೆ.

ಇನ್ನೂ 13 ಮಂದಿ ಶಂಕಿತ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆಯೆಂದು ಇಸ್ತಾಂಬುಲ್ ನ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಾರ್ಯಾಲಯ ತಿಳಿಸಿದೆ.

ಮೂರು ತಿಂಗಳುಗಳ ಹಿಂದೆ ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಭುಗಿಲೆದ್ದ ಬಳಿಕ ಟರ್ಕಿ ಹಾಗೂ ಇಸ್ರೇಲ್ ನ ಬಾಂಧವ್ಯ ಹದಗೆಟ್ಟಿದೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗಾನ್ ಅವರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಬಲ ಟೀಕಾಕಾರರೆನಿಸಿದ್ದಾರೆ.

ಕಳೆದ ವಾರ ಎರ್ದೊಗಾನ್ ಅವರು ನೆತನ್ಯಾಹು ಅವರನ್ನು ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಹೋಲಿಸಿದ್ದರು ಹಾಗೂ ಇಸ್ರೇಲ್ ಪಡೆಗಳು ನಡೆಸುತ್ತಿರುವ ‘ಭಯೋತ್ಪಾದನೆ’ಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಆಗ್ರಹಿಸಿದ್ದರು.

ಅಲ್ಲದೆ ಇಸ್ರೇಲ್ ನಲ್ಲಿನ ತನ್ನ ದೇಶದ ರಾಯಭಾರಿಯನ್ನು ಕೂಡಾ ಎರ್ದಾಗಾನ್ ಹಿಂದಕ್ಕೆ ಕರೆಸಿಕೊಂಡಿದ್ದರು ಹಾಗೂ ಇಸ್ರೇಲಿ ಕಮಾಂಡರ್ಗಳು ಹಾಗೂ ರಾಜಕೀಯ ನಾಯಕರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News