ಅಮೆರಿಕ: ಇಸ್ರೇಲ್‌ಗೆ ಇನ್ನಷ್ಟು ಮಿಲಿಟರಿ ಸಹಾಯ ಒದಗಿಸುವ ಬೈಡನ್‌ ಆಡಳಿತದ ನಿರ್ಧಾರ ವಿರೋಧಿಸಿ ಹಿರಿಯ ಅಧಿಕಾರಿ ರಾಜೀನಾಮೆ

Update: 2023-10-20 05:16 GMT

Photo: PTI

ವಾಷಿಂಗ್ಟನ್:‌ ಇಸ್ರೇಲ್-ಹಮಾಸ್‌ ಯುದ್ಧದ ನಡುವೆ ಹಾಗೂ ಗಾಝಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ಸತತ ದಾಳಿಗಳ ನಡುವೆ ಇಸ್ರೇಲ್‌ಗೆ ಇನ್ನಷ್ಟು ಮಿಲಿಟರಿ ಸಹಾಯ ಒದಗಿಸುವ ಬೈಡನ್‌ ಆಡಳಿತದ ನಿರ್ಧಾರದ ಕುರಿತು ಕಳವಳ ವ್ಯಕ್ತಪಡಿಸಿ ಅಮೆರಿಕಾದ ಬ್ಯುರೋ ಆಫ್‌ ಪೊಲಿಟಿಕಲ್‌ ಅಫೇರ್ಸ್‌ ಅಧಿಕಾರಿ ಜೋಶ್‌ ಪೌಲ್‌ ರಾಜೀನಾಮೆ ನೀಡಿದ್ದಾರೆ. ಅವರು ಕಳೆದ 11 ವರ್ಷಗಳಿಂದ ಈ ಹುದ್ದೆಯಲ್ಲಿದ್ದರು.

ಹಮಾಸ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನ ಅಮೆರಿಕಾ ಬೆಂಬಲಿತ ಪ್ರತಿಕ್ರಿಯೆಯು ಇಸ್ರೇಲಿಗಳು ಮತ್ತು ಫೆಲೆಸ್ತೀನೀಯರಿಗೆ ಇನ್ನಷ್ಟು ಕಷ್ಟಗಳನ್ನು ತಂದೊಡ್ಡಲಿದೆ ಎಂದು ಪೌಲ್‌ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಇಸ್ರೇಲ್-ಹಮಾಸ್‌ ಸಂಘರ್ಷ ಕುರಿತಂತೆ ಬೈಡನ್‌ ಆಡಳಿತ ಮತ್ತು ಅಮೆರಿಕಾದ ಕಾಂಗ್ರೆಸ್‌ನ ಹೆಚ್ಚಿನವರ ಪ್ರತಿಕ್ರಿಯೆಯ ಬಗ್ಗೆಯೂ ಟೀಕಿಸಿದ ಅವರು ಅದು ಬೌದ್ಧಿಕ ದಿವಾಳಿತನದಿಂದ ಕೂಡಿದೆ ಎಂದರಲ್ಲದೆ ದೂರದೃಷ್ಟಿಯಿಲ್ಲದ ವಿನಾಶಕಾರಿ ಮತ್ತು ಅನ್ಯಾಯಯುತ ನೀತಿಗೆ ಬೆಂಬಲದೊಂದಿಗೆ ಕೆಲಸ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

“ನಾವು ದಶಕಗಳ ಮಾಡಿದ ಅದೇ ತಪ್ಪನ್ನು ಪುನರಾವರ್ತಿಸುತ್ತಿದ್ಧೇವೆ ಎಂಬ ಭಯವಿದೆ. ಅದರ ಭಾಗವಾಗಿರಲು ನಾನು ನಿರಾಕರಿಸುತ್ತೇನೆ,” ಎಂದು ಪೌಲ್‌ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಇಸ್ರೇಲ್‌ಗೆ 10 ಬಿಲಿಯನ್‌ ಡಾಲರ್‌ ಮೌಲ್ಯದ ರಕ್ಷಣಾ ಸಹಾಯ ಒದಗಿಸಲು ಜೋ ಬೈಡನ್‌ ಅವರು ಪರಾಮರ್ಶಿಸುತ್ತಿರುವ ನಡುವೆ ಪೌಲ್‌ ಅವರ ರಾಜೀನಾಮೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News