ಮೊರಾಕ್ಕೊದಲ್ಲಿ ಪ್ರಬಲ ಭೂಕಂಪ: 296 ಮಂದಿ ಸಾವು

Update: 2023-09-09 05:28 GMT

Photo- twitter.com

ರಬಾತ್: ಆಫ್ರಿಕಾದ ಮೊರಾಕ್ಕೊದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸುಮಾರು 296 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 6.8 ತೀವ್ರತೆಯ ಭೂಕಂಪ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

"ತಾತ್ಕಾಲಿಕ ವರದಿಯ ಪ್ರಕಾರ, ಭೂಕಂಪದಿಂದಾಗಿ ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ 296 ಜನರು ಮೃತಪಟ್ಟಿದ್ದಾರೆ. 153 ಜನರು ಗಾಯಗೊಂಡಿದ್ದಾರೆ" ಎಂದು ಮೊರಾಕೊದ ಆಂತರಿಕ ಸಚಿವಾಲಯ ತಿಳಿಸಿದೆ.

ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಅಲ್-ಹೌಜ್ ಪಟ್ಟಣದಲ್ಲಿ, ಮನೆ ಕುಸಿದು ಮನೆಯ ಸದಸ್ಯರು ಅದರಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕಾಡುತ್ತಿದ್ದು, ರಕ್ತ ಸಂಗ್ರಹ ಘಟಕಗಗಳು ಗಾಯಗೊಂಡವರಿಗೆ ರಕ್ತದಾನ ಮಾಡಲು ಸ್ಥಳೀಯ ನಿವಾಸಿಗಳಿಗೆ ಕರೆ ನೀಡಿದೆ.

ಭೂಕಂಪವು ಮರಕೇಶ್‌ನ ನೈಋತ್ಯಕ್ಕೆ 71 ಕಿಲೋಮೀಟರ್ ಮತ್ತು 18.5 ಕಿಲೋಮೀಟರ್ ಆಳದಲ್ಲಿ ರಾತ್ರಿ 11:11 ಕ್ಕೆ ಸಂಭವಿಸಿದೆ ಎಂದು ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

2004 ರಲ್ಲಿ ಮೊರಾಕ್ಕೊದ ಅಲ್ ಹೋಸಿಮಾದಲ್ಲಿ ನಡೆದ ಭೂಕಂಪದಲ್ಲಿ ಕನಿಷ್ಠ 628 ಜನರು ಸಾವನ್ನಪ್ಪಿದ್ದರು. 1980 ರಲ್ಲಿ ನೆರೆಯ ಅಲ್ಜೀರಿಯಾದಲ್ಲಿ ನಡೆದ ಭೂಕಂಪದಲ್ಲಿ 2,500 ಜನರು ಮೃತಪಟ್ಟು, 3 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News