ಹಾಂಕಾಂಗ್ನಲ್ಲಿ ಹಂದಿಜ್ವರ ಉಲ್ಬಣ: 900 ಹಂದಿಗಳ ಹತ್ಯೆಗೆ ಸೂಚನೆ
Update: 2023-12-09 18:08 GMT
ಹಾಂಕಾಂಗ್: ಹಾಂಕಾಂಗ್ನ ನ್ಯೂ ಟೆರಿಟರೀಸ್ ಜಿಲ್ಲೆಯ ಫಾರ್ಮ್ನಲ್ಲಿನ ಪ್ರಾಣಿಗಳಲ್ಲಿ ಮಾರಣಾಂತಿಕ ಆಫ್ರಿಕನ್ ಹಂದಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ 900ಕ್ಕೂ ಅಧಿಕ ಹಂದಿಗಳನ್ನು ಕೊಲ್ಲಲು ಅಧಿಕಾರಿಗಳು ಆದೇಶಿಸಿರುವುದಾಗಿ ವರದಿಯಾಗಿದೆ.
ಪರೀಕ್ಷೆಗೆ ಒಳಪಡಿಸಿದ 30 ಹಂದಿಗಳಲ್ಲಿ 19ರಲ್ಲಿ ಹಂದಿಜ್ವರ ಪತ್ತೆಯಾದ್ದರಿಂದ ಆ ಫಾರ್ಮ್ನಿಂದ ಹಂದಿಗಳ ಸಾಗಾಣಿಕೆಯನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಈ ಫಾರ್ಮ್ನ ಮೂರು ಕಿ.ಮೀ ವ್ಯಾಪ್ತಿಯಲ್ಲಿರುವ ಇತರ 8 ಫಾರ್ಮ್ಗಳಿಗೆ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆ(ಎಎಫ್ಸಿಡಿ) ಹೇಳಿದೆ.
ಹಂದಿಗಳಿಗೆ ಮಾರಣಾಂತಿಕವಾಗಿರುವ ಹಂದಿಜ್ವರಕ್ಕೆ ಲಸಿಕೆ ಲಭ್ಯವಿಲ್ಲ. ಆದರೆ ಇದು ಮಾನವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹೇಳಿದೆ.