ಇಯು ಸೇರ್ಪಡೆ ವಿಳಂಬಕ್ಕೆ ವಿರೋಧ | ಜಾರ್ಜಿಯಾದಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ

Update: 2024-11-29 14:55 GMT

PC  : PTI

ಟಿಬಿಲಿಸಿ : ಯುರೋಪಿಯನ್ ಯೂನಿಯನ್(ಇಯು) ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿನ ಮಾತುಕತೆಯನ್ನು ಅಮಾನತುಗೊಳಿಸುವ ಜಾರ್ಜಿಯಾದ ಪ್ರಧಾನಿಯ ನಿರ್ಧಾರವನ್ನು ವಿರೋಧಿಸಿ ದೇಶದಾದ್ಯಂತ ನಡೆದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ, ಜಲಫಿರಂಗಿ ವಿಫಲವಾದ ಬಳಿಕ ರಬ್ಬರ್ ಬುಲೆಟ್ ಪ್ರಯೋಗಿಸಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಯುರೋಪಿಯನ್ ಯೂನಿಯನ್‍ಗೆ ಸೇರ್ಪಡೆಗೊಳ್ಳುವ ಕುರಿತ ಮಾತುಕತೆಯನ್ನು 2028ರ ಅಂತ್ಯದವರೆಗೆ ಅಮಾನತುಗೊಳಿಸುವುದಾಗಿ ಪ್ರಧಾನಿ ಇರಾಕ್ಲಿ ಕೊಬಾಖಿಡ್ಜೆ ಘೋಷಿಸಿರುವುದನ್ನು ವಿರೋಧಿಸಿ ರಾಜಧಾನಿ ಟಿಬಿಲಿಸಿ ಹಾಗೂ ಇತರ ಪ್ರಮುಖ ನಗರಗಳಲ್ಲಿ ಸಾವಿರಾರು ಮಂದಿ ರ್ಯಾಲಿ ನಡೆಸಿದರು. ಟಿಬಿಲಿಸಿಯಲ್ಲಿ ಪ್ರತಿಭಟನಾಕಾರರು ಪೊಲೀಸರ ಜತೆ ಘರ್ಷಣೆಗೆ ಇಳಿದಿದ್ದು ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕಾನೂನಿನಡಿ ಅವಕಾಶವಿರುವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ಹೇಳಿದೆ.

ಯುರೋಪಿಯನ್ ಯೂನಿಯನ್‍ನ ಮತ್ತು ಜಾರ್ಜಿಯಾದ ಧ್ವಜಗಳನ್ನು ಬೀಸುತ್ತಿದ್ದ ಪ್ರತಿಭಟನಾಕಾರರು ಸಂಸತ್‍ನ ಹೊರಗೆ ಜಾಥಾ ನಡೆಸಿದರಲ್ಲದೆ, ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯೊಡ್ಡಿದರು. ಜಾರ್ಜಿಯಾದಲ್ಲಿ ರಾಜಕೀಯ ಅಸ್ಥಿರತೆ ಮೂಡಿದ್ದು ಹೊಸದಾಗಿ ಆಯ್ಕೆಗೊಂಡ ಸಂಸತ್ ಮತ್ತು ಸರಕಾರದ ನ್ಯಾಯಸಮ್ಮತತೆಯನ್ನು ದೇಶದ ಅಧ್ಯಕ್ಷೆ ಸಲೋಮ್ ಜುರಾಬಿಶ್ವಿಲಿ ಪ್ರಶ್ನಿಸಿದ್ದಾರೆ.

ಗುರುವಾರ ಮಧ್ಯರಾತ್ರಿಯಿಂದ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದರು. ಶುಕ್ರವಾರ ಬೆಳಿಗ್ಗೆ ಮಾಸ್ಕ್ ಧರಿಸಿದ್ದ ಪೊಲೀಸರು ಪ್ರತಿಭಟನಾಕಾರರು ಹಾಗೂ ಪತ್ರಕರ್ತರನ್ನು ಕ್ರೂರವಾಗಿ ಥಳಿಸಿದರಲ್ಲದೆ ರಬ್ಬರ್ ಬುಲೆಟ್ ಪ್ರಯೋಗಿಸಿದರು. ಆಗ ಪ್ರತಿಭಟನಾಕಾರರು ಬ್ಯಾರಿಕೇಡ್‍ಗಳಿಗೆ ಬೆಂಕಿ ಹಚ್ಚಿದರಲ್ಲದೆ, ಈ ಸ್ವಯಂ ಘೋಷಿತ ಪ್ರಧಾನಿ ನಮ್ಮ ಯುರೋಪಿಯನ್ ಭವಿಷ್ಯವನ್ನು ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು. ಹಲವು ಪತ್ರಕರ್ತರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಅಕ್ಟೋರ್ ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ಸಂಸದರು ನೂತನ ಸಂಸತ್ ಅನ್ನು ಬಹಿಷ್ಕರಿಸಿದ್ದಾರೆ. ಚುನಾವಣೆಯಲ್ಲಿ ಆಡಳಿತಾರೂಢ ಜಾರ್ಜಿಯನ್ ಡ್ರೀಮ್ ಪಾರ್ಟಿ ಬಹುಮತ ಪಡೆದಿತ್ತು. ಆದರೆ ಚುನಾವಣೆ ಅಸಾಂವಿಧಾನಿಕ ಎಂದು ಘೋಷಿಸಿರುವ ಅಧ್ಯಕ್ಷೆ ಸಲೋಮ್ ಜುರಾಬಿಶ್ವಿಲಿ ಸಾಂವಿಧಾನಿಕ ನ್ಯಾಯಾಲಯದ ಮೂಲಕ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಬಯಸಿದ್ದಾರೆ.

ಪೊಲೀಸರ ಕ್ರಮವನ್ನು ಖಂಡಿಸಿರುವ ಅಧ್ಯಕ್ಷೆ ` ಇಂದು ಅಸ್ತಿತ್ವದಲ್ಲಿಲ್ಲದ ಮತ್ತು ನ್ಯಾಯಸಮ್ಮತವಲ್ಲದ ಸರಕಾರವು ತನ್ನದೇ ಆದ ಜನರ ಮೇಲೆ ಯುದ್ಧವನ್ನು ಘೋಷಿಸಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಯ ಹೇಳಿಕೆಯನ್ನು ವಿರೋಧಿಸಿ 90ಕ್ಕೂ ಅಧಿಕ ಸಂಸದರು ಜಂಟಿ ಹೇಳಿಕೆಯನ್ನು ಬಿಡುಗೆಗೊಳಿಸಿದ್ದಾರೆ.

► ರಶ್ಯ ಪರ ನಿಲುವು

ಯುರೋಪಿಯನ್ ಯೂನಿಯನ್‍ನಿಂದ ದೂರ ಸರಿಯುತ್ತಿರುವ ಜಾರ್ಜಿಯನ್ ಡ್ರೀಮ್ ಪಕ್ಷ ರಶ್ಯದ ಪರ ವಾಲುತ್ತಿದ್ದು ದೇಶವು ಯುರೋಪಿಯನ್ ಯೂನಿಯನ್‍ನ ಸದಸ್ಯತ್ವ ಪಡೆಯುವುದನ್ನು ವಿರೋಧಿಸುತ್ತಿದೆ ಎಂಬ ಆರೋಪವಿದೆ.

ಅಮೆರಿಕ ಮತ್ತು ಯುರೋಪಿಯನ್ ದೇಶಗಳು ಜಾರ್ಜಿಯಾವನ್ನು ರಶ್ಯ-ಉಕ್ರೇನ್ ಯುದ್ಧಕ್ಕೆ ಎಳೆಯುತ್ತಿದೆ ಎಂದು ಚುನಾವಣೆಗೂ ಮುನ್ನ ಪ್ರಧಾನಿ ಇರಾಕ್ಲಿ ಕೊಬಾಖಿಡ್ಜೆ ಹೇಳಿಕೆ ನೀಡಿದ್ದರು. ಅಕ್ಟೋಬರ್ ನಲ್ಲಿ ನಡೆದಿದ್ದ ಚುನಾವಣೆಯ ಫಲಿತಾಂಶವನ್ನು ತಿರಸ್ಕರಿಸುವ ನಿರ್ಣಯವನ್ನು ಯುರೋಪಿಯನ್ ಪಾರ್ಲಿಮೆಂಟ್ ಅಂಗೀಕರಿಸಿದ್ದು ಅಂತರರಾಷ್ಟ್ರೀಯ ಮೇಲ್ವಿಚಾರಣೆಯಡಿ ಒಂದು ವರ್ಷದೊಳಗೆ ಹೊಸದಾಗಿ ಚುನಾವಣೆ ನಡೆಸುವಂತೆ ಮತ್ತು ಜಾರ್ಜಿಯಾ ಪ್ರಧಾನಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ನಿರ್ಬಂಧ ಜಾರಿಗೆ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News