ಸಿರಿಯಾದಲ್ಲಿ ರಶ್ಯದ ಸೇನಾ ನೆಲೆ ಬಳಿ ದಾಳಿ ನಡೆಸದಂತೆ ಇಸ್ರೇಲ್‍ ಗೆ ಆಗ್ರಹ

Update: 2024-11-13 15:59 GMT

ಸಾಂದರ್ಭಿಕ ಚಿತ್ರ (PTI)

ಮಾಸ್ಕೋ: ಲೆಬನಾನ್‌ ನ ಹಿಜ್ಬುಲ್ಲಾ ವಿರುದ್ಧದ ದಾಳಿಯ ಭಾಗವಾಗಿ ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸುವಾಗ ಸಿರಿಯಾದಲ್ಲಿರುವ ತನ್ನ ಸೇನಾ ನೆಲೆಯ ಬಳಿ ದಾಳಿಯನ್ನು ತಪ್ಪಿಸುವಂತೆ ಇಸ್ರೇಲನ್ನು ಆಗ್ರಹಿಸಿರುವುದಾಗಿ ರಶ್ಯದ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ರಶ್ಯದ ಬೆಂಬಲ ಪಡೆದಿರುವ ಸಿರಿಯಾ ಅಧ್ಯಕ್ಷ ಬಷಾರ್ ಅಸಾದ್ ರ ಭದ್ರಕೋಟೆ ಲಟಾಕಿಯಾದ ಮೇಲೆ ಕಳೆದ ತಿಂಗಳು ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. 2011ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಪ್ರಾರಂಭವಾದಾಗಿನಿಂದ ಬಷಾರ್ ಅಸಾದ್ ಪರ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಪಡೆಯೂ ಹೋರಾಟ ನಡೆಸುತ್ತಿದೆ. ಇರಾನ್ ತನ್ನ ಅಸ್ತಿತ್ವವನ್ನು ಸಿರಿಯಾಕ್ಕೆ ವಿಸ್ತರಿಸಲು ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಲಟಾಕಿಯಾ ನಗರದ ಸಮೀಪದ ಹೈಮಿಮ್ ಪಟ್ಟಣದ ಬಳಿ ರಶ್ಯದ ವಾಯು ನೆಲೆಯಿದೆ. `ಇಸ್ರೇಲ್ ವಾಸ್ತವವಾಗಿ ಹೈಮಿಮ್ ಸಮೀಪದಲ್ಲಿ ವಾಯುದಾಳಿ ನಡೆಸಿದೆ. ರಶ್ಯದ ಮಿಲಿಟರಿ ಸಿಬ್ಬಂದಿಗಳ ಜೀವವನ್ನು ಅಪಾಯಕ್ಕೆ ಒಡ್ಡುವ ಇಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಇಸ್ರೇಲ್ ಅಧಿಕಾರಿಗಳಿಗೆ ನಮ್ಮ ಸೇನೆಯು ಸೂಚಿಸಿದೆ. ಅಕ್ಟೋಬರ್ ನ ಈ ಘಟನೆ ಮರುಕಳಿಸದು ಎಂದು ನಾವು ನಂಬಿದ್ದೇವೆ. ರಶ್ಯದ ವಾಯುನೆಲೆಯನ್ನು ಹಿಜ್ಬುಲ್ಲಾಗಳಿಗೆ ಶಸ್ತ್ರಾಸ್ತ್ರ ಸಾಗಿಸಲು ಬಳಸಲಾಗುತ್ತಿಲ್ಲ ' ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿಶೇಷ ಪ್ರತಿನಿಧಿ ಅಲೆಕ್ಸಾಂಡರ್ ಲಾವ್ರೆಂಟಿವ್‍ರನ್ನು ಉಲ್ಲೇಖಿಸಿ `ಆರ್‍ಐಎ ನವೋಸ್ತಿ' ಸುದ್ದಿಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಸಿರಿಯಾದ ಮೇಲೆ ತೀವ್ರ ಬಾಂಬ್ ದಾಳಿ ನಡೆಸುತ್ತಿದೆ. ಆದರೆ ಸಿರಿಯಾ ರಾಜಧಾನಿ ದಮಾಸ್ಕಸ್‍ ನ ವಾಯವ್ಯದಲ್ಲಿರುವ ಲಟಾಕಿಯಾ ನಗರದ ಮೇಲೆ ತೀರಾ ವಿರಳವಾಗಿ ದಾಳಿ ನಡೆಸಿದೆ. ಸಿರಿಯಾದ ಮೂಲಕ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ ಎಂದು ಇಸ್ರೇಲ್ ಆರೋಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News