ವಿಶ್ವಸಂಸ್ಥೆ ಹವಾಮಾನ ನಿಧಿ ಕರಡು ನಿರ್ಣಯ ಬಿಡುಗಡೆ | ಹವಾಮಾನ ಕ್ರಮಕ್ಕೆ ನಿಧಿ ಹೆಚ್ಚಿಸುವ ಬಗ್ಗೆ ಮೂಡದ ಸಹಮತ

Update: 2024-11-13 14:51 GMT

PC :PTI

ಬಾಕು: ಬುಧವಾರ ಬಿಡುಗಡೆಯಾದ ವಿಶ್ವಸಂಸ್ಥೆ ಹವಾಮಾನ ಒಪ್ಪಂದದ ಹೊಸ ಕರಡು ಬಡ ದೇಶಗಳಿಗೆ ನಿಧಿಗಳನ್ನು ಸಂಗ್ರಹಿಸಲು ವಾಸ್ತವಿಕ ಆಯ್ಕೆಗಳನ್ನು ಪ್ರಸ್ತಾಪಿಸಿದೆ. ಆದರೆ ಒಪ್ಪಂದವನ್ನು ದೀರ್ಘಕಾಲದಿಂದ ವಿಳಂಬಗೊಳಿಸಿರುವ ಕೆಲವು ಪರಿಹರಿಸಲಾಗದ ಅಂಶಗಳು ಹಾಗೆಯೇ ಉಳಿದಿವೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಹವಾಮಾನ ಕ್ರಮಕ್ಕಾಗಿ ಹಣವನ್ನು ಹೆಚ್ಚಿಸಲು ಹೊಸ ಒಪ್ಪಂದವನ್ನು ಮಾಡಿಕೊಳ್ಳುವುದು ಅಝರ್‍ಬೈಜಾನ್‌ ನ ಬಾಕು ನಗರದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ(ಸಿಒಪಿ29) ಸಮಾಲೋಚಕರ ಅಗ್ರ ಆದ್ಯತೆಯಾಗಿದೆ. ಆದರೆ ಅತ್ಯಂತ ವಿವಾದಾತ್ಮಕವಾಗಿರುವ ಈ ವಿಷಯದ ಬಗ್ಗೆ ಒಮ್ಮತಕ್ಕೆ ಬರಲು ಸುಮಾರು 200 ದೇಶಗಳ ಸಮಾಲೋಚಕರು ವಿಫಲವಾಗಿದ್ದಾರೆ. ದೀರ್ಘಾವಧಿಯ ಹಣಕಾಸು ಒಪ್ಪಂದದ ಇತ್ತೀಚಿನ ಕರಡು ಪ್ರಕಾರ, ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಿಂದ ವಾರ್ಷಿಕ ಬದ್ಧತೆಯನ್ನು ಕನಿಷ್ಠ 1.3 ಲಕ್ಷ ಕೋಟಿ ಡಾಲರ್‌ ಗಳಿಗೆ ನಿಗದಿಗೊಳಿಸಲು ಬಯಸಿವೆ. ತಮ್ಮ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಒತ್ತಡ ಎದುರಿಸುತ್ತಿರುವ ಕೆಲವು ದೇಣಿಗೆದಾರರು ತಮ್ಮ ಬಜೆಟ್‍ಗಳಿಂದ ದೊಡ್ಡ ಪ್ರಮಾಣದ ಸಾರ್ವಜನಿಕ ಹಣದ ಭರವಸೆ ನೀಡಲು ಹಿಂಜರಿಯುತ್ತಿದ್ದಾರೆ. ಕರಡಿನ ಮುಂಚಿನ ಆವೃತ್ತಿ ಶ್ರೀಮಂತ ದೇಶಗಳಿಗೆ ಹೆಚ್ಚಿನ ಭಾರವನ್ನು ಹೊರಿಸುತ್ತವೆ ಎಂದು ಪರಿಗಣಿಸಿರುವ ಅಭಿವೃದ್ಧಿ ಹೊಂದಿದ ದೇಶಗಳು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದವು. ಆದ್ದರಿಂದ ಹೊಸ ಒಪ್ಪಂದದ ಬಗ್ಗೆ ಕರೆ ನೀಡಲಾಗಿದ್ದು ಹೊಸ ಕರಡು ಒಪ್ಪಂದವು ಮೂರು ವಿಶಾಲ ಅಂಶಗಳನ್ನು ಸಾರಾಂಶಗೊಳಿಸಿದೆ.

ಮೊದಲಿನ ಅಂಶದ ಪ್ರಕಾರ, ಇಂದಿನ ಹವಾಮಾನ ಬದಲಾವಣೆಗೆ ಹೆಚ್ಚಿನ ಜವಾಬ್ದಾರರಾಗಿರುವ ಶ್ರೀಮಂತ, ಕೈಗಾರೀಕರಣಗೊಂಡಿರುವ ರಾಷ್ಟ್ರಗಳು ತಮ್ಮ ಬಜೆಟ್‍ಗಳಿಂದ ಹೆಚ್ಚು ಪಾವತಿಸುತ್ತಾರೆ. ಎರಡನೇ ಅಂಶದ ಪ್ರಕಾರ ಇತರ ದೇಶಗಳೂ ಈ ಹೊರೆಯನ್ನು ಹಂಚಿಕೊಳ್ಳಬೇಕು(ಇದು ಅಭಿವೃದ್ಧಿ ಹೊಂದಿದ ದೇಶಗಳ ಪ್ರಮುಖ ಬೇಡಿಕೆಯಾಗಿದೆ). ಮೂರನೆಯ ಅಂಶವು ಈ ಮೇಲೆ ಹೇಳಿದ ಎರಡು ಅಂಶಗಳನ್ನು ಮಿಶ್ರಗೊಳಿಸಿದೆ. ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳ ಬಣಗಳು(ಬಹುತೇಕ ಆಫ್ರಿಕಾ ಖಂಡದ ದೇಶಗಳು) 220 ಶತಕೋಟಿ ಡಾಲರ್‌ ಗಳ ನಿಧಿಗೆ ಬೇಡಿಕೆ ಇರಿಸಿದ್ದರೆ, ಸಮುದ್ರದ ಅಲೆಗಳ ಮಟ್ಟ ಏರಿಕೆಯಾಗುವ ಭೀತಿ ಎದುರಿಸುತ್ತಿರುವ ಸಣ್ಣ ದ್ವೀಪರಾಷ್ಟ್ರಗಳು 39 ಶತಕೋಟಿ ಡಾಲರ್ ನಿಧಿಯನ್ನು ಬಯಸಿವೆ.

`ಹೊಸ ಕರಡು ಒಪ್ಪಂದದ ಪಠ್ಯವು ಒಟ್ಟು ಮೊತ್ತದ ಕುರಿತ ಅಂತಿಮ ಒಪ್ಪಂದದ ಬಗ್ಗೆ ಹೆಚ್ಚಿನ ದೃಢವಾದ ಆಯ್ಕೆಗಳನ್ನು, ಅಂತೆಯೇ ಕನಿಷ್ಠ ಅಭಿವೃದ್ಧಿ ಹೊಂದಿದ ಅಥವಾ ಹೆಚ್ಚು ದುರ್ಬಲ ದೇಶಗಳಿಗೆ ನಿರ್ದಿಷ್ಟ ಉದ್ದೇಶಗಳನ್ನು ಪ್ರಸ್ತಾವಿಸಿದೆ. ದುರದೃಷ್ಟವಶಾತ್ ಇಲ್ಲಿ ಅಸ್ಪಷ್ಟತೆಯಿದೆ. ಹವಾಮಾನ ನಿಧಿಯ ಬಗ್ಗೆ ಸ್ಪಷ್ಟವಾಗಿ ವಿವರಿಸುವ , ನಿಕಟ ಮತ್ತು ಪಾರದರ್ಶಕ ಮೇಲುಸ್ತುವಾರಿಯ ಕೊರತೆ ಕರಡು ಒಪ್ಪಂದದಲ್ಲಿ ಎದ್ದು ಕಾಣಿಸುತ್ತಿದೆ' ಎಂದು `ಗ್ಲೋಬಲ್ ಸಿಟಿಝನ್' ಎಂಬ ಸರಕಾರೇತರ ಸಂಘಟನೆಯ ಫ್ರೆಡ್‍ರಿಕ್ ರೋಡರ್ ಅಭಿಪ್ರಾಯಪಟ್ಟಿದ್ದಾರೆ.

34 ಪುಟಗಳ ಹೊಸ ಕರಡು ಒಪ್ಪಂದವು ಎಲ್ಲಾ ಆಯ್ಕೆಗಳನ್ನೂ ಪ್ರತಿನಿಧಿಸಿದೆ. ಇದೀಗ ಕೆಲವು ನಿರ್ಣಾಯಕ ನಿರ್ಧಾರಗಳ ಬಗ್ಗೆ ಸಹಮತ ಮೂಡಿಸುವ ನಿಟ್ಟಿನಲ್ಲಿ ಸಮಾಲೋಚಕರು ಕಾರ್ಯ ನಿರ್ವಹಿಸಬೇಕು ಎಂದು ಹಮಾನಾ ತಜ್ಞ ಡೇವಿಡ್ ವಾಸ್ಕೋ ಹೇಳಿದ್ದಾರೆ. ಸಿಒಪಿ29 ಶೃಂಗಸಭೆ ನವೆಂಬರ್ 22ರವರೆಗೆ ನಡೆಯಲಿದೆ.

► ಅಭಿವೃದ್ಧಿಶೀಲ ದೇಶಗಳಿಗೆ ನಿಧಿ ಹೆಚ್ಚಿಸಲು ಪಾಕ್ ಆಗ್ರಹ

“ಈಗ ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಹವಾಮಾನ ಶೃಂಗಸಭೆಯು ಅಭಿವೃದ್ಧಿಶೀಲ ಮತ್ತು ದುರ್ಬಲ ದೇಶಗಳಿಗೆ ಹವಾಮಾನ ನಿಧಿಯನ್ನು ಹೆಚ್ಚಿಸುವ ಆರ್ಥಿಕ ಶೃಂಗಸಭೆಯಾಗಿ ಪರಿವರ್ತನೆಯಾಗುವ ನಿರೀಕ್ಷೆಯಿದೆ” ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಬುಧವಾರ ಹೇಳಿದ್ದಾರೆ.

ಸಿಒಪಿ29ರ ನೇಪಥ್ಯದಲ್ಲಿ ಮಂಗಳವಾರ ನಡೆದ `ಜಾಗತಿಕ ಮುಖಂಡರ ಹವಾಮಾನ ಕ್ರಮ' ಸಮಾವೇಶದಲ್ಲಿ ಮಾತನಾಡಿದ ಷರೀಫ್ `ಅಭಿವೃದ್ಧಿಶೀಲ ದೇಶಗಳು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಮತ್ತು ಹವಾಮಾನ ಯೋಜನೆಯ ಅರ್ಧಾಂಶದಷ್ಟನ್ನು ಅನುಷ್ಠಾನಗೊಳಿಸಲೂ 2030ರ ಒಳಗೆ ಅಂದಾಜು 56.8 ಲಕ್ಷ ಕೋಟಿ ಡಾಲರ್ ನಿಧಿಯ ಅಗತ್ಯವಿದೆ' ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಹವಾಮಾನ ಯೋಜನೆಗಳಿಗೆ ಕೋಟ್ಯಾಂತರ ಡಾಲರ್ ನಿಧಿಯನ್ನು ಖಾತರಿಪಡಿಸುವುದು ಅಝರ್‍ಬೈಜಾನ್‌ ನ ಬಾಕು ನಗರದಲ್ಲಿ ನಡೆಯುತ್ತಿರುವ ಸಿಒಪಿ ಶೃಂಗಸಭೆಯಲ್ಲಿ ಸುಮಾರು 200 ರಾಷ್ಟ್ರಗಳ ಪ್ರಮುಖ ಕಾರ್ಯವಾಗಿದೆ. `ಜಾಗತಿಕ ಹವಾಮಾನ ಸೂಚ್ಯಂಕ'ದ ಪ್ರಕಾರ ಹವಾಮಾನ ಬದಲಾವಣೆಗೆ ಅತ್ಯಂತ ದುರ್ಬಲ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News