ಹದಿಹರೆಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಶಿಕ್ಷಕಿ ಬಂಧನ
ವಾಷಿಂಗ್ಟನ್: ಅರ್ಕಾನ್ಸಸ್ ಚರ್ಚ್ ನಲ್ಲಿ ಭೇಟಿಯಾದ 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಮೆರಿಕದ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
26 ವರ್ಷ ವಯಸ್ಸಿನ ರೇಗನ್ ಗ್ರೇ ಅವರನ್ನು ಈ ತಿಂಗಳ ಆರಂಭದಲ್ಲಿ ಬಂಧಿಸಲಾಗಿದೆ. ಲಿಟ್ಲ್ ರಾಕ್ ಇಮ್ಯಾನ್ಯುಯಲ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುವ ವೇಳೆ 2020ರಿಂದೀಚೆಗೆ 15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಮಗನ ಮೊಬೈಲ್ ಫೋನ್ ನಲ್ಲಿದ್ದ ಸಂದೇಶಗಳನ್ನು ನೋಡಿದ ಬಳಿಕ ಬಾಲಕನ ಪೋಷಕರು ಮಹಿಳೆ ಬಗ್ಗೆ ಹಿರಿಯ ಪಾಸ್ಟರ್ ಗೆ ದೂರು ನೀಡಿದ್ದರು. ಬಾಲಕನಿಗೆ ನಗ್ನ ಚಿತ್ರಗಳನ್ನು ಹೇರಳವಾಗಿ ಕಳುಹಿಸುತ್ತಿದ್ದುದು ಕಂಡುಬಂದಿತ್ತು.
ಲಿಟ್ಲ್ ರಾಕ್ ಕ್ರಿಶ್ಚಿಯನ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ, ಕೌನ್ಸಿಲಿಂಗ್ ವೇಳೆ ಈ ಸಂಬಂಧ ದೈಹಿಕ ಸಂಬಂಧವಾಗಿರಲಿಲ್ಲ ಎಂದು ಚರ್ಚ್ ಅಧಿಕಾರಿಗಳಿಗೆ ತಿಳಿಸಿದ್ದಳು. ಈ ವರ್ಷದ ಫೆಬ್ರುವರಿಯಲ್ಲಿ ಸ್ನ್ಯಾಪ್ ಚಾಟ್ ಮೂಲಕ 15 ವರ್ಷದ ಬಾಲಕನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದುದು ದೃಢಪಟ್ಟಿತ್ತು.