ಟೆಕ್ಸಾಸ್ ವಿಮಾನ ನಿಲ್ದಾಣದಲ್ಲಿ ಭಾರಿ ಬಿರುಗಾಳಿಗೆ ನಿಂತಲ್ಲಿಂದಲೇ ಮುಂದಕ್ಕೆ ಚಲಿಸಿದ ಅಮೆರಿಕನ್ ಏರ್ ಲೈನ್ಸ್ ವಿಮಾನ ; ವಿಡಿಯೊ ವೈರಲ್

Update: 2024-05-29 15:17 GMT

PC:X \ @aviationbrk

ಟೆಕ್ಸಾಸ್: ಬಿರುಗಾಳಿ ಪೀಡಿತ ಟೆಕ್ಸಾಸ್ ನಲ್ಲಿನ ಡಲ್ಲಾಸ್ ಫೋರ್ಟ್ ವರ್ತ್ ವಿಮಾನ ನಿಲ್ದಾಣದಲ್ಲಿ ಬೀಸಿದ ಭಾರಿ ಬಿರುಗಾಳಿಯ ತೀವ್ರತೆಗೆ ಅಮೆರಿಕನ್ ಏರ್ ಲೈನ್ಸ್ ವಿಮಾನವೊಂದು ನಿಂತಲ್ಲಿಂದಲೇ ಮುಂದಕ್ಕೆ ಚಲಿಸಿರುವ ಘಟನೆ ವರದಿಯಾಗಿದೆ. ಸುಮಾರು 90,000 ಪೌಂಡ್ ತೂಕದ ಬೋಯಿಂಗ್ ವಿಮಾನವು ಬಿರುಗಾಳಿಯ ತೀವ್ರತೆಗೆ ಮುಂದಕ್ಕೆ ಚಲಿಸಿದ್ದು, ಸರಕು ತುಂಬುವ ಏಣಿಯಿಂದ ಕಳಚಿಕೊಂಡಿದೆ ಎಂದು ಹೇಳಲಾಗಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ.

ಟೆಕ್ಸಾಸ್ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಬೀಸಿದ ಭಾರಿ ಬಿರುಗಾಳಿಯ ಕಾರಣಕ್ಕೆ ವಿಮಾನವು ಸರಕು ತುಂಬುವ ಏಣಿಯಿಂದ ಕಳಚಿಕೊಂಡು ಮುಂದಕ್ಕೆ ಚಲಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ವಿಮಾನದ ಪಕ್ಕ ಸರಂಜಾಮು ಟ್ರಕ್ ಕೂಡಾ ನಿಂತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಹೀಗಿದ್ದೂ, ವಿಮಾನವು ಟ್ರಕ್ ಗೆ ಡಿಕ್ಕಿ ಹೊಡೆದಿಲ್ಲ.

ಅಮೆರಿಕನ್ ಏರ್ ಲೈನ್ಸ್ ಪ್ರಕಾರ, ಗಂಟೆಗೆ 80 ಮೈಲಿ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದ ತೊಂದರೆಗೊಳಗಾಗಿರುವ ವಿಮಾನಗಳ ಪೈಕಿ ಈ ವಿಮಾನವೂ ಒಂದಾಗಿದೆ. ಈ ಬಿರುಗಾಳಿಯ ತೀವ್ರತೆಯಿಂದಾಗಿ ವಿಮಾನ ನಿಲ್ದಾಣದ ಆವರಣದಲ್ಲಿನ ಬೃಹತ್ ವಾಣಿಜ್ಯ ಗೋದಾಮು ಕೂಡಾ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

ಭಾರಿ ಬಿರುಗಾಳಿಯ ಕಾರಣಕ್ಕೆ ಕನಿಷ್ಠ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಆರು ಲಕ್ಷ ನಿವಾಸಿಗಳನ್ನು ಹೊಂದಿರುವ ಟೆಕ್ಸಾಸ್ ನಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಕಡಿತವುಂಟಾಗಿದೆ ಎಂದು CNN ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದೇ ವೇಳೆ ಡಲ್ಲಾಸ್-ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ವಿಮಾನ ಹಾರಾಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ 700ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News