ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಪದವಿ ನಿರಾಕರಿಸಿದ ಹಾರ್ವರ್ಡ್ ವಿವಿ

Update: 2024-06-10 12:08 GMT

PC : thecrimson

ವಾಷಿಂಗ್ಟನ್: ಹಾರ್ವರ್ಡ್ ವಿವಿಯಲ್ಲಿ 2024ನೇ ಸಾಲಿನ ಘಟಿಕೋತ್ಸವ ಸಮಾರಂಭ ನಡೆದು ಎರಡು ವಾರಗಳೇ ಕಳೆದಿವೆ, ಆದರೆ ಅಸ್ಮರ್ ಅಸ್ರಾರ್ ಸಫಿ(23) ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದ ಪದವಿಯನ್ನು ಸ್ವೀಕರಿಸಲು ಈಗಲೂ ಕಾಯುತ್ತಿದ್ದಾರೆ.

ಮೂಲತಃ ಪಾಕಿಸ್ತಾನದ ಲಾಹೋರಿನವರಾಗಿರುವ ಸಫಿ ಜೊತೆ ಇನ್ನೂ 12 ವಿದ್ಯಾರ್ಥಿಗಳು ಇದೇ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇವರೆಲ್ಲರೂ ವಿಶ್ವದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಹಾರ್ವರ್ಡ್‌ನಲ್ಲಿ ತಮ್ಮ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಕನಿಷ್ಠ ಒಂದು ವರ್ಷದವರೆಗೆ ಅವರಿಗೆ ಪದವಿಗಳನ್ನು ನೀಡಲಾಗುವುದಿಲ್ಲ ಎಂದು aljazeera.com ವರದಿ ಮಾಡಿದೆ.

ವಿವಿಯ ಉನ್ನತ ಆಡಳಿತ ಮಂಡಳಿಯಾಗಿರುವ ಹಾರ್ವರ್ಡ್ ಕಾರ್ಪೊರೇಷನ್ ಕಳೆದ ತಿಂಗಳು ಕ್ಯಾಂಪಸ್‌ನಲ್ಲಿ ಮೂರು ವಾರಗಳ ಕಾಲ ನಡೆದಿದ್ದ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಈ ವಿದ್ಯಾರ್ಥಿಗಳು ಮೇ 23ರಂದು ನಡೆದ ಈ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ತಮ್ಮ ಪದವಿಗಳನ್ನು ಸ್ವೀಕರಿಸುವುದನ್ನು ನಿಷೇಧಿಸಿತ್ತು.

ನಾನು ಸಲ್ಲಿಸಿರುವ ಮೇಲ್ಮನವಿಗಳ ಕುರಿತು ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ ಎಂದು ಸಫಿ ತಿಳಿಸಿದರು.

‘ನಾನು ರೋಡ್ಸ್ ಸ್ಕಾಲರ್ ಆಗಿದ್ದೇನೆ ಮತ್ತು ನನ್ನ ಹಾರ್ವರ್ಡ್ ಪದವಿಯನ್ನು ಒಂದು ವರ್ಷ ಕಾಲ ತಡೆಹಿಡಿದಿರುವುದರಿಂದ ಆಕ್ಸ್‌ಫರ್ಡ್ ವಿವಿಯಲ್ಲಿ ಮ್ಯಾಟ್ರಿಕ್ಯುಲೇಷನ್ ಮಾಡಬಹುದೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ’ ಎಂದರು.

ಶ್ರದ್ಧಾ ಜೋಶಿ ಹಾರ್ವರ್ಡ್ ಕಾಲೇಜಿನ ತನ್ನ ಬೋಧಕ ವೃಂದದ ಬೆಂಬಲದ ಹೊರತಾಗಿಯೂ ಇದೇ ಸ್ಥಿತಿಯನ್ನು ಎದುರಿಸುತ್ತಿರುವ ಇನ್ನೋರ್ವ ವಿದ್ಯಾರ್ಥಿನಿಯಾಗಿದ್ದಾರೆ.

‘ಮೇಲ್ಮನವಿಯನ್ನು ಸಲ್ಲಿಸಿದ್ದು,ವಿವಿಯಿಂದ ಸಂವಹನಕ್ಕಾಗಿ ಕಾಯುತ್ತಿದ್ದೇನೆ. ನಾವು ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಪ್ರಕ್ರಿಯೆಯ ಅಸ್ಪಷ್ಟತೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗೊಂದಲದಲ್ಲಿದ್ದಾರೆ ಮತ್ತು ಮೇಲ್ಮನವಿಗಳಿಗೆ ಟೈಮ್‌ಲೈನ್ ಕೂಡ ಸ್ಪಷ್ಟವಿಲ್ಲ’ ಎಂದು ಶ್ರದ್ಧಾ ತಿಳಿಸಿದರು.

ಟೆಕ್ಸಾಸ್‌ನಲ್ಲಿ ಹುಟ್ಟಿ ಬೆಳೆದಿರುವ ಶ್ರದ್ಧಾ ಬ್ರಿಟನ್‌ನಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಯೋಜಿಸಿದ್ದರು. ಆದರೆ ಅವರ ಭವಿಷ್ಯವು ಈಗ ಅನಿಶ್ಚಿತವಾಗಿದೆ.

‘ಹಾರ್ವರ್ಡ್-ಯುಕೆ ಫೆಲೋಶಿಪ್‌ನೊಂದಿಗೆ ನಾನು ಕ್ಯಾಂಬ್ರಿಡ್ಜ್ ವಿವಿಯನ್ನು ಸೇರಬೇಕಿತ್ತು,ಆದರೆ ಪದವಿ ಕೈಗೆ ಸಿಗದೆ ನನ್ನ ಸ್ಥಿತಿ ಡೋಲಾಯಮಾನವಾಗಿದೆ. ಪಾರದರ್ಶಕತೆಯ ಕೊರತೆ ಮತ್ತು ಆಡಳಿತದ ಕಳಪೆ ಸಂವಹನದಿಂದಾಗಿ ನಮ್ಮಮುಂದಿನ ಹೆಜ್ಜೆಗಳು ಹೇಗಿರಲಿವೆ ಎನ್ನುವುದನ್ನು ಊಹಿಸಲೂ ಕಷ್ಟವಾಗಿದೆ’ ಎಂದು ಶ್ರದ್ಧಾ ಹೇಳಿದರು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News