ಸುದೀರ್ಘ ಹಗೆತನದ ನಂತರ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ | ವಿಶ್ವಸಂಸ್ಥೆಯ ಪಾತ್ರವೇನು?

Update: 2024-11-30 15:55 GMT

PC : X/@UN/Twitter

ಟೆಲ್ ಅವೀವ್ : ಈ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಲೆಬನಾನ್ ನೊಂದಿಗೆ ತೀವ್ರವಾಗಿ ಉಲ್ಬಣಗೊಂಡಿದ್ದ ಬಿಕ್ಕಟ್ಟಿಗೆ ಅಂತ್ಯವಾಡಲು ಅಮೆರಿಕ ಬೆಂಬಲಿತ ಪ್ರಸ್ತಾವನೆಗೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಿಗೇ ನವೆಂಬರ್ 27ರಂದು ಇಸ್ರೇಲ್ ಹಾಗೂ ಲೆಬನಾನ್ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ.

ಈ ಹಿಂದೆ, ಹಗೆತನವನ್ನು ಶಾಶ್ವತವಾಗಿ ಅಂತ್ಯಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಆದರೆ, ಲೆಬನಾನ್ ನೊಂದಿಗೆ ಕದನ ವಿರಾಮ ಒಪ್ಪಂದ ಏರ್ಪಟ್ಟ ಕೇವಲ ಒಂದೇ ದಿನದಲ್ಲಿ ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಗುರುವಾರ ಇಸ್ರೇಲ್ ಆರೋಪಿಸಿದೆ.

ಇತ್ತೀಚೆಗೆ ಸಹಿ ಮಾಡಲಾಗಿರುವ (ಹಾಗೂ ಮುರಿದು ಬಿದ್ದಿದೆ ಎಂದು ಆರೋಪಿಸಲಾಗಿರುವ) ಕದನ ವಿರಾಮ ಒಪ್ಪಂದದ ನಿಯಮಗಳನ್ನು 2006ರಲ್ಲಿ ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವಿನ ಕದನವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಅಂಗೀಕರಿಸಲಾಗಿದ್ದ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿರ್ಣಯ 1701 ಅಡಿ ರೂಪಿಸಲಾಗಿದೆ.

2006ರಲ್ಲಿ ಲೆಬನಾನ್ ಸಚಿವ ಸಂಪುಟ, ಅಂದಿನ ಹಿಝ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹಾಗೂ ಇಸ್ರೇಲ್ ಸಚಿವ ಸಂಪುಟ ಎಲ್ಲವೂ ಈ ನಿರ್ಣಯವನ್ನು ತಮ್ಮದೇ ಸ್ವಂತ ಅಧಿಕಾರ ಬಳಸಿ ಅನುಮೋದಿಸಿದರೂ, ಅದರ ನಿಯಮಗಳು ಇಲ್ಲಿಯವರೆಗೂ ಜಾರಿಗೊಂಡಿಲ್ಲ. ಇದರ ಪರಿಣಾಮವಾಗಿ ಇಸ್ರೇಲ್ ಹಾಗೂ ಲೆಬನಾನ್ ನಡುವಿನ ಕದನ ವಿರಾಮ ಒಪ್ಪಂದ ಅತಂತ್ರಗೊಂಡಿದೆ.

ಇಸ್ರೇಲ್ ಹಾಗೂ ಲೆಬನಾನ್ ನಡುವಿನ ಸುದೀರ್ಘ ಹಗೆತನವನ್ನು ಅಂತ್ಯಗೊಳಿಸಲು ಸದ್ಯ ಮಾಡಿಕೊಳ್ಳಲಾಗಿರುವ ಕದನ ವಿರಾಮ ಒಪ್ಪಂದದ ಹಿಂದೆ ಐತಿಹಾಸಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದ ಪಾತ್ರ ಅಡಗಿದೆ.

ಇಸ್ರೇಲ್ ಹಾಗೂ ಲೆಬನಾನ್ ನಡುವಿನ ಸುದೀರ್ಘ ಕಾಲದ ಹಗೆತನಕ್ಕೆ ಅಂತ್ಯವಾಡಲು 2006ರಲ್ಲಿ 19 ಕಂಡಿಕೆಗಳ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಈ ನಿರ್ಣಯದ ಪ್ರಕಾರ, ಇಸ್ರೇಲ್ ಹಾಗೂ ಲೆಬನಾನ್ ನಡುವೆ ಬಫರ್ ವಲಯವನ್ನು ನಿರ್ಮಿಸುವುದು, ಲೆಬನಾನ್ ನಲ್ಲಿ ವಿಶ್ವಸಂಸ್ಥೆ ಮಧ್ಯಂತರ ಪಡೆಗಳನ್ನು ವಿಸ್ತರಿಸುವುದು ಸೇರಿತ್ತು. ಇದರನ್ವಯ, ಶಾಂತಿಪಾಲನೆ ಮಾಡುವುದು ಮಾತ್ರ ಈ ಪಡೆಗಳ ಕೆಲಸವಾಗಿರಲಿಲ್ಲ. ಬದಲಿಗೆ, ನೀಲಿ ಗೆರೆಗುಂಟ ನಡೆಯುವ ಯಾವುದೇ ಚಟುವಟಿಕೆಗಳ ಕುರಿತು ಉಭಯ ದೇಶಗಳಿಗೆ ಮಾಹಿತಿ ನೀಡುವ ಮೂಲಕ ತಪ್ಪಗ್ರಹಿಕೆಯನ್ನು ತಗ್ಗಿಸುವ ಹಾಗೂ ಮತ್ತೆ ಸಂಘರ್ಷ ಉಲ್ಬಣಗೊಳ್ಳದಂತೆ ತಡೆಯುವ ಹೊಣೆಗಾರಿಕೆಯನ್ನೂ ಹೊಂದಿದ್ದವು.

ನವೆಂಬರ್ 27ರಂದು ಅಮೆರಿಕ ಬೆಂಬಲಿತ ಪ್ರಸ್ತಾವನೆಯನ್ವಯ ಏರ್ಪಟ್ಟಿರುವ ಕದನ ವಿರಾಮ ಒಪ್ಪಂದ ಕೂಡಾ ಇದೇ ನಿರ್ಣಯದ ಚೌಕಟ್ಟಿಗೆ ಒಳಪಟ್ಟಿದೆ ಹಾಗೂ 60 ದಿನಗಳ ಅವಧಿಯೊಳಗೆ ಹಗೆತನಕ್ಕೆ ಶಾಶ್ವತವಾಗಿ ಅಂತ್ಯವಾಡಬೇಕು ಎಂದೂ ಈ ಒಪ್ಪಂದದಲ್ಲಿ ಆಗ್ರಹಿಸಲಾಗಿದೆ.

2006ರ ನಿರ್ಣಯದನ್ವಯ ಲೆಬನಾನ್ ಸರಕಾರದ ಅನುಮತಿಯಿಲ್ಲದೆ ಲೆಬನಾನ್ ಪ್ರಾಂತ್ಯದಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ನಿಯೋಜಿಸಬಾರದು ಎಂದು ಹೇಳಲಾಗಿದ್ದರೂ, ನೂತನ ಕದನ ವಿರಾಮ ಒಪ್ಪಂದದನ್ವಯ, ಅಧಿಕೃತ ಸೇನಾ ಪಡೆ ಹಾಗೂ ಭದ್ರತಾ ಪಡೆಗಳು ಮಾತ್ರ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಹುದಾಗಿದೆ. ಈ ಪೈಕಿ ಲೆಬನಾನ್ ಸಶಸ್ತ್ರ ಪಡೆಗಳು, ಆಂತರಿಕ ಭದ್ರತಾ ಪಡೆಗಳು, ಸಾಮಾನ್ಯ ಭದ್ರತೆ, ರಾಜ್ಯ ಭದ್ರತೆ, ಲೆಬನಾನ್ ಸುಂಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಪೊಲೀಸರು ಮಾತ್ರ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಹುದು ಎಂದು ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News