ಫ್ಲೋರಿಡಾ ಕರಾವಳಿಗೆ ಅಪ್ಪಳಿಸಿದ ಮಿಲ್ಟನ್ ಚಂಡಮಾರುತ | ನೂರಾರು ಪ್ರದೇಶಗಳು ಜಲಾವೃತ, ವಿದ್ಯುತ್ ಸಂಪರ್ಕ ಕಡಿತ
ಟ್ಯಾಂಪಾ (ಫ್ಲೋರಿಡಾ) : ಮಿಲ್ಟನ್ ಚಂಡಮಾರುತವು ಬುಧವಾರ ತೀವ್ರ ರೂಪ ಪಡೆದಿದ್ದು, ಫ್ಲೋರಿಡಾದ ಕರಾವಳಿಯನ್ನು ತಾಸಿಗೆ 60 ಕಿ.ಮೀ. ವೇಗದಲ್ಲಿ ಅಪ್ಪಳಿಸಿದೆ.ಗಂಟೆಗೆ 100 ಮೈಲು ವೇಗದಲ್ಲಿ ಬೀಸುತ್ತಿರುವ ಗಾಳಿಯೊಂದಿಗೆ ಬಾರೀ ಮಳೆ ಸುರಿಯುತ್ತಿದ್ದು, ಹಲವು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ರಾಜ್ಯದ ವಿವಿಧೆಡೆ ಚಂಡಮಾರುತಕ್ಕೆ ಸಂಬಂಧಿಸಿದ ದುರಂತಗಳಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.
ಫ್ಲೋರಿಡಾ ರಾಜ್ಯದ ಎಲ್ಲೆಡೆ ಬಿರುಗಾಳಿಯ ಹೊಡೆತಕ್ಕೆ ನೂರಾರು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಬುಧವಾರ ರಾತ್ರಿಯಿಡೀ ವಿದ್ಯುತ್ ಇಲ್ಲದೆ 10.50 ಲಕ್ಷಕ್ಕೂ ಮನೆಗಳು ಹಾಗೂ ಉದ್ಯಮಸಂಸ್ಥೆಗಳು ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆಗೀಡಾದವು. ಹಲವೆಡೆ ನಳ್ಳಿ ನೀರಿನ ಸೌಲಭ್ಯವೂ ಕಡಿತಗೊಂಡಿತ್ತು.
ಮಿಲ್ಟನ್ ಚಂಡಮಾರುತದ ಹೊಡೆತಕ್ಕೆ ಸ್ಪಾನಿಶ್ ಲೇಕ್ಸ್ ಕಂಟ್ರಿ ಕ್ಲಬ್ ಪ್ರದೇಶವು ವ್ಯಾಪಕವಾಗಿ ಹಾನಿಗೀಡಾಗಿದ್ದು, ಹಲವಾರು ಮನೆಗಳು ಹಾನಿಗೀಡಾಗಿವೆ. ಚಂಡಮಾರುತದಿಂದಾಗಿ ಸಂತ್ರಸ್ತರಾದವರ ರಕ್ಷಣೆಗಾಗಿ ಫ್ಲೋರಿಡಾ ಹಾಗೂ ಮತ್ತಿತರ ರಾಜ್ಯಗಳ 9 ಸಾವಿರಕ್ಕೂ ಅಧಿಕ ನ್ಯಾಶನಲ್ ಗಾರ್ಡ್ ಸದಸ್ಯರನ್ನು ನಿಯೋಜಿಸಲಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಫ್ಲಾರಿಡಾದ 15 ಜಿಲ್ಲೆಗಳಲ್ಲಿನ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ 70.20 ಲಕ್ಷಕ್ಕೂ ಅಧಿಕ ಮಂದಿ ಕಡ್ಡಾಯವಾಗಿ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಫ್ಲೋರಿಡಾದಿಂದ ಆಗಮಿಸುವ ಹಾಗೂ ನಿರ್ಗಮಿಸುವ 1900ಕ್ಕೂ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.