ಕೆನಡಾ | ಟ್ರುಡೊ ಪದಚ್ಯುತಿಗೆ ಸ್ವಪಕ್ಷದಲ್ಲೇ ಕೇಳಿಬಂದ ಆಗ್ರಹ

Update: 2024-10-24 05:58 GMT

Photo : Reuters

ಒಟ್ಟಾವಾ : ಭಾರತದ ಜೊತೆಗಿನ ಜಟಾಪಟಿ ಮಧ್ಯೆ ಕೆನಡಾ ಪ್ರಧಾನಿ ಜಸ್ಟಿನ್  ಟ್ರುಡೊ ಕೆನಡಾದಲ್ಲಿ ಸ್ವಪಕ್ಷದ ಶಾಸಕರಿಂದ ವಿರೋಧವನ್ನು ಎದುರಿಸುತ್ತಿದ್ದು, ಲಿಬರಲ್ ಪಕ್ಷದ 153 ಶಾಸಕರಲ್ಲಿ 24 ಮಂದಿ ಅವರ ಪದಚ್ಯುತಿಗೆ ಆಗ್ರಹಿಸಿದ್ದಾರೆ ಎಂದು INDIA TODAY ವರದಿ ಮಾಡಿದೆ.

ಕೆನಡಾದ ಆಡಳಿತಾರೂಢ ಲಿಬರಲ್ಸ್ ನ ಅತೃಪ್ತ ಶಾಸಕರು ಬುಧವಾರ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಕೆಲ ಶಾಸಕರು ಟ್ರುಡೊ ಕಾರ್ಯ ವೈಖರಿ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಟ್ರುಡೊ ಅವರಿಗೆ ಯಾವುದೇ ತಕ್ಷಣದ ಅಪಾಯವನ್ನು ಉಂಟುಮಾಡಿದಿದ್ದರೂ, 9 ವರ್ಷಗಳ ಅಧಿಕಾರವಧಿಯಲ್ಲಿ ಅವರು ಎದುರಿಸಿದ ಅತ್ಯಂತ ಗಂಭೀರವಾದ ರಾಜಕೀಯ ಸವಾಲುಗಳಲ್ಲಿ ಇದು ಕೂಡ ಒಂದಾಗಿದೆ.

ಪಕ್ಷವು ಬಲವಾಗಿದೆ ಮತ್ತು ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇದ್ದಾರೆ ಎಂದು ಆಶಾಭಾವನೆಯಿಂದಿರುವ ಟ್ರುಡೊ, 2025ರ ಅಂತ್ಯದೊಳಗೆ ನಡೆಯಲಿರುವ ಚುನಾವಣೆಗೆ ಲಿಬರಲ್ ಪಕ್ಷವನ್ನು ಮುನ್ನಡೆಸಲಿದ್ದಾರೆ. ಆದರೆ, ಲಿಬರಲ್ ಪಕ್ಷದ 153 ಶಾಸಕರಲ್ಲಿ 24 ಶಾಸಕರು ಟ್ರುಡೊ ಅವರ ವಿರುದ್ಧ ಸಮಾಧಾನ ಹೊರಹಾಕಿ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಕೆನಡಾದ ಬ್ರಾಡ್ಕಾಸ್ಟಿಂಗ್ ಕಾರ್ಪ್ ಹೇಳಿದೆ.

ಈ ಬೆಳವಣಿಗೆ ಕೆಲ ಸಮಯದಿಂದ ನಡೆಯುತ್ತಿದೆ, ಅವರು ಕೇಳಲು ಇಷ್ಟಪಟ್ಟರೂ ಅಥವಾ ಇಲ್ಲದಿದ್ದರೂ ಇಲ್ಲಿ ಏನಾಗುತ್ತಿದೆ ಅದನ್ನು ಸಂಸದರು ಪ್ರಧಾನಿಗೆ ಹೇಳುತ್ತಾರೆ ಎಂದು ಕೆನಡಾ ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ.

ಜೂನ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆದ ವಿಶೇಷ ಚುನಾವಣೆಗಳಲ್ಲಿ ಟ್ರಡೋ ಅವರ ನಾಯಕತ್ವದ ಲಿಬರಲ್ ಪಕ್ಷವು ಎರಡು ಸಂಸದೀಯ ಸ್ಥಾನಗಳನ್ನು ಕಳೆದುಕೊಂಡ ನಂತರ ಟ್ರುಡೊ ಅವರೊಂದಿಗಿನ ಅಸಮಾಧಾನ ಭುಗಿಲೆದ್ದಿದೆ. ಕೆಲವು ಶಾಸಕರು ಮುಂದಿನ ಚುನಾವಣೆ ಸಿದ್ಧತೆ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News