ಅಮೆರಿಕ: ಟ್ರಂಪ್ ರೊಂದಿಗಿನ ಭಾರತೀಯ ಮೂಲದ ದಂಪತಿಯ ಮಾತುಕತೆ ವಿಡಿಯೋ ವೈರಲ್

Update: 2024-10-22 11:27 GMT

ಪೆನ್ ಸಿಲ್ವೇನಿಯ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗಿನ ಭಾರತೀಯ ದಂಪತಿಗಳ ಆತ್ಮೀಯ ಮಾತುಕತೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರವಿವಾರ ಪೆನ್ ಸಿಲ್ವೇನಿಯದಲ್ಲಿ ಪ್ರಚಾರ ನಡೆಸುತ್ತಿದ್ದ ಡೊನಾಲ್ಡ್ ಟ್ರಂಪ್, ತಮ್ಮ ಬಿಳಿ ಅಂಗಿ ಹಾಗೂ ಕೆಂಪು ಟೈ ಮೇಲೆ ಕಪ್ಪು-ಹಳದಿ ಬಣ್ಣದ ಎಪ್ರನ್ ತೊಟ್ಟುಕೊಂಡು ಸ್ಥಳೀಯ ಮೆಕ್ ಡೊನಾಲ್ಡ್ ಮಳಿಗೆಯಲ್ಲಿ ಫ್ರೆಂಚ್ ಫ್ರೈಸ್ ವಿತರಿಸಲು ನಿಂತಿದ್ದರು.

ಟ್ರಂಪ್ ಟೇಕ್ ಓವರ್ ಕೌಂಟರ್ ನಲ್ಲಿ ಕಾರ್ಯನಿರ್ವಹಿಸುವಾಗ, ಅಲ್ಲಿಗೆ ಬಂದ ಭಾರತೀಯ ಮೂಲದ ದಂಪತಿಗಳು ‘ನಮಸ್ತೆ’ ಎಂದು ಟ್ರಂಪ್ ಗೆ ವಂದಿಸಿದ್ದಾರೆ. ಟ್ರಂಪ್, ಆ ದಂಪತಿಗಳು ನೀಡಿದ್ದ ಆರ್ಡರ್ ಅನ್ನು ಪತಿಯ ಕೈಗೆ ಹಸ್ತಾಂತರಿಸಿದಾಗ, ರೋಮಾಂಚನಗೊಂಡ ಪತಿಯು, “ಧನ್ಯವಾದ, ನನ್ನ ಅಧ್ಯಕ್ಷರೆ!’ ಎಂದು ಉದ್ಗರಿಸಿದ್ದಾರೆ. ಮತ್ತೊಮ್ಮೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ ಅವರು, ಪದೇ ಪದೇ ಟ್ರಂಪ್ ಅವರನ್ನು ‘ಮಾನ್ಯ ಅಧ್ಯಕ್ಷರೇ’ ಎಂದು ಸಂಬೋಧಿಸುತ್ತಾ, “ನಮ್ಮಂಥ ಸಾಮಾನ್ಯರು ಇಂಥ ಕಡೆ ಬರುವುದನ್ನು ನೀವು ಸಾಧ್ಯವಾಗಿಸಿದಿರಿ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವಿಡಿಯೋವನ್ನು ಹಾಡ್ಜ್ ಟ್ವಿನ್ಸ್ ಎಂಬ ಬಳಕೆದಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಗೆ 8 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ದಕ್ಕಿವೆ. ಈ ಪೋಸ್ಟ್ ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.

ನಾನು ನನ್ನ ಯೌವನದಲ್ಲಿ ಫಾಸ್ಟ್ ಫುಡ್ ಚೈನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಪದೇ ಪದೇ ಹೇಳುತ್ತಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಾಲೆಳೆಯಲೂ ಡೊನಾಲ್ಡ್ ಟ್ರಂಪ್ ಮೆಕ್ ಡೊನಾಲ್ಡ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಾನು ಫಾಸ್ಟ್ ಫುಡ್ ಚೈನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ ಎಂಬ ಕಮಲಾ ಹ್ಯಾರಿಸ್ ಅವರ ಪ್ರತಿಪಾದನೆಯನ್ನು ಕಟ್ಟುಕತೆ ಎಂದು ಅಲ್ಲಗಳೆದಿರುವ ಡೊನಾಲ್ಡ್ ಟ್ರಂಪ್, “ನಾನೀಗ ಕಮಲಾ ಹ್ಯಾರಿಸ್ ಗಿಂತ 15 ನಿಮಿಷ ಹೆಚ್ಚು ಅವಧಿಗೆ ಕೆಲಸ ಮಾಡಿದ್ದೇನೆ” ಎಂದು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News