150 ವರ್ಷಗಳ ಬಳಿಕ ಚಿನ್ನದ ಕಲಾಕೃತಿಗಳನ್ನು ಘಾನಕ್ಕೆ ಮರಳಿಸಿದ ಬ್ರಿಟನ್
ಲಂಡನ್: ನೂರೈವತ್ತು ವರ್ಷಗಳಿಗಿಂತಲೂ ಹಿಂದೆ ಅಸಾಂಟೆ ರಾಜ್ಯ (ಈಗಿನ ಘಾನ)ದಿಂದ ಕದಿಯಲಾಗಿದ್ದ 32 ಚಿನ್ನದ ಮತ್ತು ಬೆಳ್ಳಿಯ ಕಲಾಕೃತಿಗಳನ್ನು ಬ್ರಿಟನ್ ಆರು ವರ್ಷಗಳ ಅವಧಿಗೆ ಸಾಲವಾಗಿ ವಾಪಸ್ ನೀಡಿದೆ ಎಂದು ಘಾನದ ಸಂಧಾನಕಾರರು ಹೇಳಿದ್ದಾರೆ.
ಈ ಕಲಾಕೃತಿಗಳ ಪೈಕಿ 15 ಬ್ರಿಟಿಶ್ ಮ್ಯೂಸಿಯಮ್ನಲ್ಲಿದ್ದರೆ, 17 ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಮ್ನಲ್ಲಿದ್ದವು.
19ನೇ ಶತಮಾನದಲ್ಲಿ ಬ್ರಿಟಿಶರು ಮತ್ತು ಅಸಾಂಟೆ ಜನರ ನಡುವೆ ನಡೆದ ಸಂಘರ್ಷದ ವೇಳೆ ಅಸಾಂಟೆ ರಾಜನ ಆಸ್ಥಾನದಿಂದ ಈ ಕಲಾಕೃತಿಗಳನ್ನು ದೋಚಲಾಗಿತ್ತು.
ಅಸಾಂಟೆ ರಾಜ್ಯದಿಂದ ಬ್ರಿಟಿಶ್ ಸೈನಿಕರು ದೋಚಿರುವ ಚಿನ್ನದ ಕಲಾಕೃತಿಗಳನ್ನು ವಾಪಸ್ ಪಡೆಯಲು ಘಾನದ ಅಧಿಕಾರಿಗಳು ಹಲವು ವರ್ಷಗಳಿಂದ ಪ್ರಯತ್ನದಲ್ಲಿ ತೊಡಗಿದ್ದರು.
ಒಪ್ಪಂದದ ಪ್ರಕಾರ, ಈ ಚಿನ್ನ ಮತ್ತು ಬೆಳ್ಳಿಯ ಸ್ಮಾರಕಗಳನ್ನು ಅಶಂಟಿ ವಲಯದ ರಾಜಧಾನಿ ಕುಮಾಸಿಯಲ್ಲಿರುವ ಮನಿಯ ಅರಮನೆಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ದೊರೆಯ ಪಟ್ಟಾಭಿಷೇಕದ ಬೆಳ್ಳಿ ಹಬ್ಬದ ಅಂಗವಾಗಿ ಒಂದು ವರ್ಷ ಈ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು.
ಆದರೆ, ಆರು ವರ್ಷಗಳ ಬಳಿಕ ಅವುಗಳನ್ನು ಬ್ರಿಟನ್ಗೆ ಮರಳಿಸಬೇಕಾಗಿದೆ.