ಬಾಂಗ್ಲಾದಲ್ಲಿ ನಿಲ್ಲದ ಮೀಸಲಾತಿ ವಿರೋಧಿ ಹಿಂಸೆ | ಪ್ರತಿಭಟನೆಗೆ ಬಲಿಯಾದವರ ಸಂಖ್ಯೆ 7ಕ್ಕೇರಿಕೆ, 500ಕ್ಕೂ ಅಧಿಕ ಮಂದಿಗೆ ಗಾಯ

Update: 2024-07-18 16:24 GMT

ಢಾಕಾ : ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಗೆ ಬಲಿಯಾದವರ ಸಂಖ್ಯೆ ಏಳಕ್ಕೇರಿದೆ ಹಾಗೂ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ದೇಶಾದ್ಯಂತ ಹಿಂಸಾಚಾರ ಹರಡುವುದನ್ನು ತಡೆಗಟ್ಟಲು ಮೊಬೈಲ್ಫೋನ್ಗಳ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ವಿದ್ಯಾರ್ಥಿ ಪ್ರತಿಭಟನಕಾರರು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದ್ದು, ಕೇವಲ ಆಸ್ಪತ್ರೆಗಳು ಹಾಗೂ ತುರ್ತು ಸೇವೆಗಳು ಮಾತ್ರವೇ ಕಾರ್ಯಾಚರಿಸಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಪ್ರತಿಭಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಬೇಕೆಂಬ ಸುಪ್ರೀಂಕೋರ್ಟ್ನ ಆದೇಶದಿಂದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹತಾಶರಾಗಬಾರದೆಂದು ಅವರು ಮನವಿ ಮಾಡಿದ್ದಾರೆ.

ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ ಬಾಂಗ್ಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

17 ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ 3.20 ಕೋಟಿಗೂ ಅಧಿಕ ಸಂಖ್ಯೆಯ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗಿರುವ ಶೇ.30ರಷ್ಟು ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಬಾಂಗ್ಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಪ್ರತಿಭಟನಾಕಾರರ ಹತ್ಯೆ ಸೇರಿದಂತೆ ಅನಪೇಕ್ಷಿತ ಘಟನೆಗಳ ಬಗ್ಗೆ ಮುಕ್ತ ಹಾಗೂ ನ್ಯಾಯಯುತ ತನಿಖೆಯನ್ನು ನಡೆಸಲಾಗುವುದು ಎಂದು ಹಸೀನಾ ಅವರು ಭರವಸೆ ನೀಡಿದ್ದಾರೆ.

ಈ ಮಧ್ಯೆ ಆಗ್ನೇಯ ಏಶ್ಯದ ರಾಷ್ಟ್ರವಾದ ಬಾಂಗ್ಲಾದಲ್ಲಿ ವಿದ್ಯಾರ್ಥಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯ ಪ್ರಜೆಗಳು ಮನೆಯೊಳಗೆ ಇರುವಂತೆ ಭಾರತೀಯ ಹೈಕಮೀಶನ್ ಕರೆ ನೀಡಿದೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ಕೂಡಾ ಅದು ನೀಡಿದೆ. ಬಾಂಗ್ಲಾದಲ್ಲಿರುವ ಭಾರತೀಯ ಪ್ರಜೆಗಳು ತಮ್ಮ ಆವಾಸ ಸ್ಥಳಗಳ ಹೊರಗೆ ಸಂಚರಿಸುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕೆಂದು ಹಾಗೂ ಪ್ರಯಾಣಿಸುವುದರಿಂದ ದೂರವಿರುವಂತೆ ಅದು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News